ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ನ್ಯಾಷನಲ್ ಲಾ ಕಾಲೇಜ್ ಆರಂಭಿಸುವ ಚಿಂತನೆ ಇದೆ. ಈ ಕುರಿತಂತೆ ಬೇಡಿಕೆ ಇದ್ದು, ತಜ್ಞರೊಂದಿಗೆ ಚರ್ಚಿಸಿ ರಾಷ್ಟ್ರೀಯ ಬಾರ್ ಕೌನ್ಸಿಲ್‍ಗೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ ಕ್ಷೇತ್ರದಲ್ಲಿ ಯುವ ವಕೀಲರಿಗೆ ವಿಪುಲ ಅವಕಾಶಗಳಿವೆ. ಕ್ರಿಮಿನಲ್, ಸಿವಿಲ್ ಜತೆಗೆ ಇಂದಿನ ದಿನಮಾನದಲ್ಲಿ ಹಲವು ಶಾಖೆಗಳು ವಿಸ್ತಾರಗೊಂಡಿವೆ. ಅಂತಾರಾಷ್ಟ್ರೀಯ ಲಾ, ಆರ್ಥಿಕ ಲಾ, ವಾಣಿಜ್ಯ ಲಾ, ಕಾರ್ಪೊರೇಟ್ ಲಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ವೃತ್ತಿ ಆರಂಭಿಸಲು ಅವಕಾಶಗಳಿವೆ ಎಂದು ಹೇಳಿದರು.
ಇದನ್ನೂ ಓದಿ | ಉತ್ಸವಗಳಿಂದ ಜನ ವೋಟು ಹಾಕುತ್ತಾರೆಂಬುವುದು ಭ್ರಮೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಗೇಲಿ
ದೇಶದಲ್ಲೇ ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದ್ದು, ಅದ್ಭುತವಾಗಿ ಕೆಲಸಮಾಡುತ್ತಿದೆ. ಪ್ರಗತಿಪರ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಗತಿಪರವಾಗಿದ್ದು, ವಕೀಲರೂ ಪ್ರಗತಿಪರವಾಗಿ ಕೆಲಸಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಸರ್ಕಾರ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ. ಈಗಾಗಲೇ ಹಾವೇರಿಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡಲಾಗಿದ್ದು, ವಕೀಲರಿಗೆ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಲಾಗಿದೆ. ಇದು ಯುವ ವಕೀಲರಿಗೆ ವೃತ್ತಿ ಸಾಮರ್ಥ್ಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಉಪಯೋಗ ವಾಗಬೇಕು ಎಂದರು.
ನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತರಿದ್ದಾರೆ. ಎಲ್.ಜಿ.ಹಾವನೂರ, ಬಿ.ಜಿ.ಬಣಕಾರ, ಮೋಹನ್ ಶಾಂತನಗೌಡ್ರ ವಕೀಲರಾಗಿ ಅತ್ಯುತ್ತಮವಾದ ಕೆಲಸಮಾಡಿದ್ದಾರೆ. ಇಂತವರ ಹಾದಿಯಲ್ಲಿ ನಮ್ಮ ಯುವ ಪ್ರತಿಭೆಗಳು ಬೆಳೆಯಬೇಕು ಎಂದ ಅವರು, ಜಿಲ್ಲೆಯ ಅಭಿವೃದ್ಧಿಗೆ ಒಂದು ನಿರ್ಧಿಷ್ಟವಾದ ದೂರದೃಷ್ಟಿ ಇಟ್ಟುಕೊಂಡು ಕೆಲಸಮಾಡಲಾಗುತ್ತಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ನೂತನ ಕೈಗಾರಿಕೆ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಇದರಿಂದ ರೈತರು, ವ್ಯಾಪಾರಸ್ಥರು, ವಕೀಲರು, ಜನಸಾಮಾನ್ಯರ ಆರ್ಥಿಕ ಚಟುವಟಿಕೆಗೆ ಪೂರಕವಾಗಲಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೊಳ್ಳುತ್ತಿದ್ದು, ರೂ.100 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಸೇರಿಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದರು. 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಿದ್ದೇವೆ. ಹಾವೇರಿ ಜಿಲ್ಲೆಗೆ 25 ವರ್ಷಗಳು ತುಂಬಿವೆ. ಹಾಗೆಯೇ ಇದೇ ನವೆಂಬರ್‌ನಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರಿಗೂ ಶುಭ ಹಾರೈಕೆಗಳು ಎಂದರು.
ಇದನ್ನೂ ಓದಿ | ಕೊಡಗು ಪಾದಯಾತ್ರೆ ಯಶಸ್ವಿಯಾಗದು: ಸಿದ್ದರಾಮಯ್ಯ ನಡೆಗೆ ಬೊಮ್ಮಾಯಿ ಟೀಕೆ