Site icon Vistara News

Narayana guru | ನಾರಾಯಣ ಗುರು ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ

Narayanaguru nigama

ಬೆಂಗಳೂರು: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಸಾರಿದ ಸಮಾಜ ಸುಧಾರಕ ಶ್ರೀ ನಾರಾಯಣಗುರುಗಳ (Narayana guru) ಹೆಸರಿನಲ್ಲಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಈ ವೇಳೆ ಸಿಎಂ ಅವರು ನಿಗಮ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಿದರು ಎಂದು ತಿಳಿದುಬಂದಿದೆ.

ಹಿಂದುಳಿದ ಸಮುದಾಯಗಳ ಪೈಕಿ ಒಂದಾದ ಬಿಲ್ಲವ ಸಮಾಜ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲೂ ಸಂಖ್ಯಾ ಬಾಹುಳ್ಯವನ್ನು ಹೊಂದಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯ ಎಂದು ಮನವಿ ಮಾಡಲಾಗಿದೆ. ಬಿಲ್ಲವ, ಈಡಿಗ, ನಾಮಧಾರಿ ಎಂಬಿತ್ಯಾದಿ ಉಪನಾಮಗಳನ್ನು ಹೊಂದಿರುವ ಸಮಾಜದ ಎಲ್ಲ ವರ್ಗವನ್ನು ಒಂದೇ ವೇದಿಕೆಯ ಅಡಿಗೆ ತಂದು ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಸಹಕರಿಸಬೇಕೆಂದು ಸಮಾಜದ ನಿಯೋಗ ಮನವಿ ಮಾಡಿತು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಗಮ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿತು.

ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ‌ ನಿಗಮ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಬಜೆಟ್ ನಲ್ಲಿ ಅಧಿಕೃತ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ರಘುಪತಿ ಭಟ್, ಹರತಾಳು ಹಾಲಪ್ಪ ಹಾಗೂ ಬಿಲ್ಲವ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರು ಹಾಜರಿದ್ದರು.

ಇದನ್ನೂ ಓದಿ | Panchamasali Reservation | 2ಡಿ ಮೀಸಲು ಬೇಡ, 2ಎನಲ್ಲೇ ಕೊಡ್ಬೇಕು: ಜ.12ರೊಳಗೆ ಘೋಷಿಸದಿದ್ದರೆ ಮತ್ತೆ ಹೋರಾಟ

Exit mobile version