ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಕ್ರಮ ಪ್ರಶ್ನಿಸಿ, ಸಿಎಂ ಇಬ್ರಾಹಿಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಇಬ್ರಾಹಿಂ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ಉಚ್ಚಾಟನೆ ಮಾಡಿದ್ದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ನಿಯಮಗಳಿಗೆ ವಿರುದ್ಧವಾಗಿ ತಮ್ಮನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ್ದರು ಎಂದು ಇಬ್ರಾಹಿಂ ಅವರು ದೂರಿದ್ದರು. ಆದರೆ, ಅರ್ಜಿಯನ್ನು ಕೋರ್ಟ್ ಶುಕ್ರವಾರ ವಜಾ ಮಾಡಿದೆ.
ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ನೇಮಕ ಪುರಸ್ಕರಿದ ನ್ಯಾಯಾಲಯ
ಕರ್ನಾಟಕ ಪ್ರದೇಶ ಜನತಾದಳ-ಜಾತ್ಯತೀತ (ಜೆಡಿಎಸ್) ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಕ್ರಮ ಹಾಗೂ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇಮಕ ಪ್ರಶ್ನಿಸಿದ್ದ ಸಿಎಂ ಇಬ್ರಾಹಿಂ ಅವರ ಅರ್ಜಿಯನ್ನು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ನೇಮಕವನ್ನು ಕೋರ್ಟ್ ಪುರಸ್ಕರಿಸಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿದ್ದ ಇಬ್ರಾಹಿಂ
ಬಿಜೆಪಿ-ಜೆಡಿಎಸ್ ಮೈತ್ರಿಯನ್ನು (BJP-JDS Alliance) ಖಂಡತುಂಡವಾಗಿ ವಿರೋಧಿಸಿದ್ದ ಮತ್ತು ತಮ್ಮದೇ ನಿಜವಾದ ಜಾತ್ಯತೀತ ಜನತಾದಳ ಎಂದು ಘೋಷಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಅವರನ್ನು ಅಕ್ಟೋಬರ್‌ನಲ್ಲಿ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿ ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ | ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೋಟರ್ ಲಿಸ್ಟ್‌ನಿಂದ ಸಾವಿರಾರು ಮತದಾರರ ಹೆಸರು ನಾಪತ್ತೆ; ಬಿಜೆಪಿ ದೂರು
ವರಿಷ್ಠರಿಗೆ ಸೆಡ್ಡು ಹೊಡೆದಿದ್ದ ಇಬ್ರಾಹಿಂ
ಬಿಜೆಪಿ ಜತೆಗಿನ ಮೈತ್ರಿಯನ್ನು ಖಂಡಿಸಿದ್ದ ಇಬ್ರಾಹಿಂ ಅವರು ಕಳೆದ ಅಕ್ಟೋಬರ್ 16ರಂದು ಸಮಾನ ಮನಸ್ಕರ ಸಭೆಯನ್ನು ನಡೆಸಿ ತಮ್ಮದೇ ನಿಜವಾದ ಜೆಡಿಎಸ್ ಎಂದು ಹೇಳಿಕೊಂಡಿದ್ದರು. ಹಲವಾರು ಮುಸ್ಲಿಂ ನಾಯಕರು, ಕೆಲವು ಇತರ ನಾಯಕರು ಕೂಡಾ ಅವರಿಗೆ ಕೈಜೋಡಿಸಿದ್ದರು. ಈ ನಡುವೆ ಎಚ್.ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಅದರ ಮಧ್ಯೆಯೇ ಕುಮಾರಸ್ವಾಮಿ ಉಚ್ಚಾಟನೆಯ ನಕಲಿ ಪ್ರಕಟಣೆ, ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದ ನಕಲಿ ಪ್ರಕಟಣೆ ಹೊರಬಿದ್ದಿತ್ತು. ಸಿ.ಎಂ. ಇಬ್ರಾಹಿಂ ಅವರು ಎಚ್.ಡಿ. ದೇವೇಗೌಡರ ಜತೆ ಮಾತನಾಡಿ ಮುಂದಿನ ಹೆಜ್ಜೆಯ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಆದರೆ, ದೇವೇಗೌಡರೇ ಸಿಎಂ ಇಬ್ರಾಹಿಂರನ್ನು ಹುದ್ದೆಯಿಂದ ಕಿತ್ತು ಹಾಕಿದ್ದರು.