Site icon Vistara News

79 ವರ್ಷಗಳ ಬಳಿಕ ಕೂಚ್ ಬೆಹಾರ್ ಟ್ರೋಫಿ ಗೆದ್ದ ರಾಜ್ಯ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Cooch Behar Trophy Karnataka

ಶಿವಮೊಗ್ಗ: ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿ(Cooch Behar Trophy) ಫೈನಲ್​ ಪಂದ್ಯದಲ್ಲಿ ಕನಾರ್ಟಕ ತಂಡ ಮುಂಬೈ ತಂಡವನ್ನು ಮಣಿಸಿ 79 ವರ್ಷಗಳ ಬಳಿಕ ಮೊದಲ ಬಾರಿಗೆ ಕಪ್​ ಗೆದ್ದ ಸಾಧನೆ ಮಾಡಿತ್ತು. ರಾಜ್ಯ ತಂಡದ ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ’79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್‌ ಬೆಹಾರ್‌ ಟ್ರೋಫಿ ಗೆದ್ದಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಆರಂಭಿಕ ಬ್ಯಾಟರ್‌ ಪ್ರಖರ್‌ ಚತುರ್ವೇದಿ ಅಜೇಯ 404 ರನ್‌ ಗಳಿಸಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ತಂಡವು 890 ರನ್‌ಗಳ ದಾಖಲೆಯ ಮೊತ್ತವನ್ನು ಪೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಯುವ ಆಟಗಾರರು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ’ ಎಂದು ಹಾರೈಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಬಾರಿಸಿದ ಅಜೇಯ 404 ರನ್ ಗಳ ನೆರವಿನಿಂದ ಕರ್ನಾಟಕ ಚಾಂಪಿಯನ್ ಆಯಿತು. ವಿಜೇತ ಕರ್ನಾಟಕ ತಂಡಕ್ಕೆ ಕೆಎಸ್ ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಹೆಚ್. ಶಂಕರ್ ಮೂರ್ತಿ ರೂ.30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್ ಅಪ್ ಮುಂಬೈ ತಂಡ ರೂ. 15 ಲಕ್ಷ ಪಡೆಯಿತು.

ಯುವರಾಜ್​ ದಾಖಲೆ ಮುರಿದಿರುವುದು ಸಂತಸ ತಂದಿದೆ; ಚತುರ್ವೇದಿ


ಅಜೇಯ 404ರನ್​ ಬಾರಿಸಿ ದಾಖಲೆ ಬರೆದ ಪ್ರಖರ್ ಚತುರ್ವೇದಿ ಈ ಸಾಧನೆ ಬಳಿಕ ಮಾತನಾಡಿ, 400 ರನ್ ಹೊಡೆದಿರುವುದು ತುಂಬಾ ಖುಷಿ ಆಗಿದೆ. ಅದರಲ್ಲೂ 25 ವರ್ಷಗಳ ಹಿಂದಿನ ಯುವರಾಜ್ ಸಿಂಗ್ ದಾಖಲೆ ಮುರಿದಿರುವುದು ಸಂತಸ ತಂದಿದೆ. ಮೊದಲ ಬಾರಿಗೆ ಕೂಚ್ ಬೆಹಾರ್ ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರ ಎನ್ನುವ ಹಿರಿಮೆ ಜೀವಿತಾವಧಿಯ ವರೆಗೆ ಇರಲಿದೆ. ಮುಂದೆ ಕರ್ನಾಟಕ ಹಿರಿಯರ ಮತ್ತು ರಾಷ್ಟೀಯ ತಂಡಕ್ಕೆ ಆಡಬೇಕೆನ್ನುವ ಕನಸು ಇದೆ. ಇದಕ್ಕಾಗಿ ನಾನು ಇನ್ನೂ ಕಠಿಣ ಅಭ್ಯಾಸ ನಡೆಸುವೆ. ನನ್ನ ಈ ಸಾಧನೆಗೆ ತಂಡದ ಬ್ಯಾಟಿಂಗ್ ಕೋಚ್ ಪವನ್ ಅವರ ಶ್ರಮ ಕೂಡ ಇದೆ ಎಂದು ಹೇಳಿದರು.

ಪಂದ್ಯಾವಳಿಯೊಂದರ ಫೈನಲ್​ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಚತುರ್ವೇದಿ ಪಾತ್ರರಾದರು. ಅವರ ಈ ಅಮೋಘ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 46 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಒಟ್ಟು 638 ಎಸೆತ ಎದುರಿಸಿ 404 ರನ್ ಗಳಿಸಿ ಅಜೇಯರಾಗುಳಿದರು.

Exit mobile version