ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರವನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೂನ್‌ನಿಂದ ಇದುವರೆಗೆ 565 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದೆ. ಅತಿವೃಷ್ಟಿಯಿಂದ 6 ಮಂದಿ ಸಾವಿಗೀಡಾಗಿದ್ದು, ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. 12 ಜಾನುವಾರುಗಳು ಸಾವನ್ನಪ್ಪಿದ್ದು, ಪರಿಹಾರ ಒದಗಿಸಲಾಗಿದೆ. ಸಾವಿಗೀಡಾದ ಒಂದು ಜಾನುವಾರಿಗೆ 37,500 ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 48 ಮನೆಗಳು ಪೂರ್ಣ ಹಾನಿಗೀಡಾಗಿದ್ದು, 950 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಈ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಹಾನಿಗೆ ನೀಡಲಾದ ಪರಿಹಾರ ದುರುಪಯೋಗವಾದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ದುರುಪಯೋಗ ತಪ್ಪಿಸಲು ಪೂರ್ಣ ಮನೆ ಹಾನಿಗೀಡಾದವರಿಗೆ ರೂ. 1.20 ಲಕ್ಷ ನಗದು ಪರಿಹಾರ ನೀಡಲಾಗುತ್ತಿದ್ದು, ಇದರೊಂದಿಗೆ ಮನೆಯನ್ನು ಸಹ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಭಾಗಶ: ಹಾನಿಗೀಡಾದ ಮನೆಗಳಿಗೆ 6500 ರೂ. ಪರಿಹಾರವನ್ನು ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುತ್ತಿದೆ. ಮಳೆಯಿಂದ ಹಾನಿಗೀಡಾದವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 43,500 ರೂ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಿಂದೆ ಪರಿಹಾರದ ವಿಷಯದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತು. ಈಗ ಏಕರೂಪದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 17 ಜನರಿಗೆ ಪರಿಹಾರ ಒದಗಿಸಲಾಗಿದ್ದು, ಮನೆ ಹಾನಿಗೀಡಾದ ಎಲ್ಲರಿಗೂ ಆದಷ್ಟು ಬೇಗನೆ ಪರಿಹಾರ ಒದಗಿಸಲಿದ್ದೇವೆ ಎಂದರು.
ಜಿಲ್ಲೆಯಲ್ಲಿ 41706 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿ, 372 ಹೆಕ್ಟೇರ್ ತೋಟಗಾರಿಕಾ ಬೆಳೆ ಗಳಿಗೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಮಳೆಯಿಂದಾಗಿ 2962 ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಆದಷ್ಟು ಬೇಗನೆ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸರಿಪಡಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.
ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳು, ಸೇತುವೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಳೆಯಿಂದಾಗಿ ಮುಳುಗಡೆಯಾಗುವ ಸಣ್ಣ ಸೇತುವೆಗಳನ್ನು ಎತ್ತರಿಸುವ ಬಗ್ಗೆ ತಾಂತ್ರಿಕ ವರದಿಯನ್ನು ಪಡೆಯಲಾಗುವುದು ಎಂದರು.
ಇದನ್ನೂ ಓದಿ: KAS Prelims Exam: ಕೆಎಎಸ್ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್ 27ಕ್ಕೆ ನಿಗದಿ
ನೆರೆ ಪರಿಹಾರ ಕಾರ್ಯಗಳಿಗೆ ಅನುದಾನ ಕೊರತೆಯಿರುವುದಿಲ್ಲ. ತುರ್ತು ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ 48 ಕೋಟಿ ರೂ. ಅನುದಾನ ಲಭ್ಯವಿದ್ದು, ತಹಸೀಲ್ದಾರ್ ಖಾತೆಗಳಲ್ಲೂ ಅನುದಾನ ಲಭ್ಯವಿದೆ. ಅಗತ್ಯ ಬಿದ್ದರೆ ಇನ್ನಷ್ಟು ಪರಿಹಾರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನೆರೆ ಹಾವಳಿಗೆ ತುತ್ತಾಗುವ ಗ್ರಾಮಗಳ ಸ್ಥಳಾಂತರ ಕುರಿತು ಸೂಕ್ತ ತೀರ್ಮಾನ
ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ಪ್ರತಿ ಬಾರಿ ನೆರೆ ಹಾವಳಿಗೆ ತುತ್ತಾಗುವ ಗ್ರಾಮಗಳ ಜನರನ್ನು ಶಾಶ್ವತವಾಗಿ ಬೇರೆ ಕಡೆಗೆ ಸ್ಥಳಾಂತರಿಸುವ ಬೇಡಿಕೆ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಕಾಗವಾಡ ತಾಲೂಕಿನ ಜೂಗಳ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ಕೆಲವು ಗ್ರಾಮಗಳು ನಿರಂತರವಾಗಿ ಸಮಸ್ಯೆ ಎದುರಿಸುತ್ತಿವೆ. ಶಹಾಪುರ, ಗಂಗಾವತಿ ಮತ್ತು ಜೂಗಳ ಗ್ರಾಮಗಳು ಪ್ರತಿ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿವೆ. ಈ ಗ್ರಾಮಗಳಲ್ಲಿ ಸುಮಾರು 3 ಸಾವಿರದಷ್ಟು ಕುಟುಂಬಗಳಿದ್ದು, ಇವರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸುವ ಬಗ್ಗೆ ಒತ್ತಾಯವಿದೆ. ಆದರೆ ಒಮ್ಮೆ ಸ್ಥಳಾಂತರಗೊಂಡ ಬಳಿಕ ಮತ್ತೆ ಅಲ್ಲಿಗೆ ಬಂದು ನೆಲೆಸಬಾರದು. ಈ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಆದಷ್ಟು ಬೇಗನೆ ಸಭೆ ಕರೆಯಲಾಗುವುದು ಎಂದು ಸಿಎಂ ಹೇಳಿದರು.
ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಲವಾರು ಮಂದಿ ಸಂಕಷ್ಟ ಎದುರಿಸುತ್ತಿರುವುದನ್ನು ಗಮನಿಸಲಾಗಿದೆ. ಸಂಕಷ್ಟದಲ್ಲಿರುವವರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: Beetroot Side Effects: ಬೀಟ್‌ರೂಟ್ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಇತರರು ಉಪಸ್ಥಿತರಿದ್ದರು.