Site icon Vistara News

Video: ವಿಧಾನಸೌಧದಿಂದ ಮೆಜೆಸ್ಟಿಕ್​​ಗೆ ಬಸ್​​ನಲ್ಲಿ ಕೈ ನಾಯಕರ ಪ್ರಯಾಣ; ಒಟ್ಟಿಗೇ ಕುಳಿತ ಸಿಎಂ-ಡಿಸಿಎಂ, ಫುಲ್ ಡಿಸ್ಕಷನ್​

Siddaramaiah Travel By BMTC Bus

#image_title

ಬೆಂಗಳೂರು: ಮಹಿಳೆಯರಿಗೆ ಸರ್ಕಾರಿ ಬಸ್​​ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ (Shakti Scheme) ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ಇಂದು ವಿಧಾನಸೌಧದ ಎದುರು ಆಯೋಜಿಸಲಾಗಿದ್ದ ಬೃಹತ್​ ಕಾರ್ಯಕ್ರಮ ಮುಕ್ತಾಯವಾಗಿದೆ. ಇಲ್ಲಿ ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿ.ಕೆ.ಶಿವಕುಮಾರ್​ ಭಾಷಣವನ್ನೂ ಮಾಡಿದ್ದಾರೆ. ವಿಧಾನಸೌಧದ ಬಳಿ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದರಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಇತರ ಕಾಂಗ್ರೆಸ್ ನಾಯಕರು ಬಿಎಂಟಿಸಿ ಬಸ್​​ನಲ್ಲಿ ಮೆಜೆಸ್ಟಿಕ್​​ನತ್ತ ಪ್ರಯಾಣ ಬೆಳೆಸಿದರು. ಈ ಬಸ್​​ ವಿಧಾನಸೌಧದಿಂದ ಜಿಪಿಒ ಸರ್ಕಲ್​​ – ಬಸವೇಶ್ವರ ವೃತ್ತ -ಮೈಸೂರು ಸರ್ಕಲ್ ಮಾರ್ಗವಾಗಿ ಕೆಂಪೇಗೌಡ ಬಸ್​ ನಿಲ್ದಾಣಕ್ಕೆ ಪ್ರವೇಶಿಸಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬಸ್​ನಲ್ಲಿ ಒಂದೇ ಸೀಟ್​​ನಲ್ಲಿ ಕುಳಿತು ಪ್ರಯಾಣಿಸಿದರು. ಈ ಬಸ್​​ನಲ್ಲಿ ಮಹಿಳಾ ಕಾರ್ಯಕರ್ತರೂ ಇದ್ದರು. ಈ ಬಸ್​ ಹೊರತಾಗಿ ಇನ್ನೂ ಮೂರ್ನಾಲ್ಕು ಕೆಎಸ್​ಆರ್​ಟಿಸಿ ಬಸ್​​ಗಳು ವಿಧಾನಸೌಧದಿಂದ ಮೆಜೆಸ್ಟಿಕ್​​ನತ್ತ ಹೊರಟಿವೆ. ಒಂದು ಬಸ್​ ಪೂರ್ತಿ ಮಹಿಳೆಯರೇ ಇದ್ದಾರೆ. ಅವರೆಲ್ಲ ಬಸ್​ ಪ್ರಯಾಣವನ್ನು ಸಖತ್​ ಎಂಜಾಯ್ ಮಾಡುತ್ತಿದ್ದಾರೆ. ಕನ್ನಡ ಹಾಡನ್ನು ಹೇಳಿ ಸಂಭ್ರಸುತ್ತಿದ್ದರು. ಇನ್ನು ಸಿದ್ದರಾಮಯ್ಯನವರು ಕಿಟಕಿಯಿಂದ ಹೊರಗೆ ನೋಡುತ್ತ, ಜನರ ಕಡೆಗೆ ಕೈಬೀಸುತ್ತಿದ್ದರು. ಡಿ.ಕೆ.ಶಿವಕುಮಾರ್​ ಅವರು ಬಸ್​ನೊಳಗೆ ಮಹಿಳಾ ಕಂಡಕ್ಟರ್​ ಬಳಿ ಮತ್ತು ಇತರ ಮಹಿಳಾ ಕಾರ್ಯಕರ್ತರ ಬಳಿ ಮಾತುಕತೆ ನಡೆಸುತ್ತಿದ್ದರು. ಇಟಿಎಂನಿಂದ ಟಿಕೆಟ್​ ತೆಗೆಯೋದು ಹೇಗೆ ಎಂಬ ವಿವರಣೆಯನ್ನೂ ಕೇಳುತ್ತಿದ್ದರು. ಇದೇ ವೇಳೆ ಡಿ.ಕೆ.ಶಿವಕುಮಾರ್​ ಮತ್ತು ಸಿಎಂ ಸಿದ್ದರಾಮಯ್ಯ ಕೂಡ ಪರಸ್ಪರ ಆಳವಾದ ಚರ್ಚೆಯಲ್ಲಿ ತೊಡಗಿದ್ದ ದೃಶ್ಯವೂ ಕಂಡುಬಂತು.

ಕಾಂಗ್ರೆಸ್ ನಾಯಕರನ್ನು ಹೊತ್ತ ಬಸ್​
ಒಟ್ಟಿಗೇ ಕುಳಿತ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​

ಮೆಜೆಸ್ಟಿಕ್‌ನಲ್ಲಿ ಸಿಎಂ ಹಸಿರು ನಿಶಾನೆ

ಮೆಜೆಸ್ಟಿಕ್​​ನ ಕೆಎಸ್​ಆರ್​ಟಿಸಿ ಬಸ್​ನಿಲ್ದಾಣದ ಟರ್ಮಿನಲ್​ 2ರಲ್ಲಿ ಕೆಎಸ್​ಆರ್​ಟಿಸಿ ಬಸ್​ ಉಚಿತ ಪ್ರಯಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಶಕ್ತಿ ಯೋಜನೆ ಉದ್ಘಾಟನೆ ಆಗುತ್ತಿದ್ದಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಈ ಯೋಜನೆಗೆ ಚಾಲನೆ ಸಿಗಲಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಬಸ್​​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ಮೆಜೆಸ್ಟಿಕ್​​ನ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದ ಪ್ಲಾಟ್​ ಫಾರ್ಮ್​​ಗೆ ವಾಯುವ್ಯ ಕರ್ನಾಟಕ ಸಾರಿಗೆಯ ಬೈಲಹೊಂಗಲ ಘಟಕದ ಬೆಳಗಾವಿ ಬಸ್​​, ಕಲ್ಯಾಣ ಕರ್ನಾಟಕ ಸಾರಿಗೆಯ ರಾಯಚೂರು ಬಸ್​, ಕೆಎಸ್​ಆರ್​ಟಿಸಿಯ ಶಿವಮೊಗ್ಗ, ಮೈಸೂರು, ಧರ್ಮಸ್ಥಳ ಬಸ್​ಗಳು ಸೇರಿ ಒಟ್ಟು 5 ಬಸ್​​ಗಳು ಬಂದು ನಿಂತಿದ್ದು, ಇವೆಲ್ಲಕ್ಕೂ ಸಿಎಂ ಹಸಿರು ನಿಶಾನೆ ತೋರಿಸಲಿದ್ದಾರೆ. ಬಸ್​ಗಳಿಗೆಲ್ಲ ಹಾರಹಾಕಿ ಸುಂದರವಾಗಿ ಅಲಂಕರಿಸಲಾಗಿದೆ.

Exit mobile version