ಹಾಸನ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ನಗರಸಭೆ ಸದಸ್ಯ ಪ್ರಶಾಂತ್ ಶರೀರವನ್ನು ಮೆರವಣಿಗೆ ಮೂಲಕ ನಗರದ ವಿವಿಧ ಬಡಾವಣೆಗಳಲ್ಲಿ ಕೊಂಡೊಯ್ಯಲಾಯಿತು.
ಹಿಮ್ಸ್ ಆಸ್ಪತ್ರೆಯಲ್ಲಿ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪಾರ್ಥಿವ ಶರೀರವನ್ನು ಶಾಂತಿನಗರದ ಮನೆಯ ಮುಂದೆ ಗುರುವಾರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪ್ರಶಾಂತ್ ಅಂತಿಮ ದರ್ಶನ ಪಡೆಯಲು ನೂರಾರು ಮಂದಿ ಬೆಂಬಲಿಗರು, ಸಾರ್ವಜನಿಕರು ಜಮಾಯಿಸಿದ್ದರು.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದರು. ಅಂತಿಮಯಾತ್ರೆ ವಾಹನವನ್ನು ಹೂವುಗಳಿಂದ ಅಲಂಕರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಿಟ್ಟಗೌಡನಹಳ್ಳಿ ರುದ್ರಭೂಮಿಯಲ್ಲಿ ಪ್ರಶಾಂತ್ ಅಂತ್ಯಕ್ರಿಯೆ ನೆರವೇರಿತು.
ಜೆಡಿಎಸ್ ಮುಖಂಡ ಬುಧವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ದುಷ್ಕರ್ಮಿಗಳು ಕೊಲೆಮಾಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ಹಿಮ್ಸ್ ಆಸ್ಪತ್ರೆ ಮುಂದೆ ನೂರಾರು ಮಂದಿ ಜಮಾಯಿಸಿದ್ದರು. ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಿಮ್ಸ್ ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸದ್ಯ ನಗರದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ.
ಇದನ್ನೂ ಓದಿ | ನಗರಸಭೆ ಸದಸ್ಯ ಹತ್ಯೆ: ಡಾ.ರಾಜ್ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್