ಪುತ್ತೂರು: ದೇಶದಲ್ಲಿರುವ ಕ್ಯಾಪಿಟಲಿಸಂ (ಬಂಡವಾಳಶಾಹಿಗಳು), ಕಮ್ಯುನಿಸಂ (ಕಮ್ಯುನಿಸ್ಟ್ ಸಿದ್ಧಾಂತ)ಗಳಿಗೆ ಉತ್ತರ ನೀಡುವುದು ಕೋ-ಓಪರೇಟಿಸಂ (ಸಹಕಾರ ತತ್ವ) ಎಂದು ಹೇಳಿದರು ಬೊಮ್ಮಾಯಿ. ಈ ರೀತಿ ಬಂಡವಾಳಶಾಹಿ ಮತ್ತು ಕಮ್ಯುನಿಸಂಗೆ ಕೋಆಪರೇಟಿಸಂ ಮೂಲಕ ಉತ್ತರ ಕೊಟ್ಟ ಕೀರ್ತಿ ಕ್ಯಾಂಪ್ಕೊ ಸಂಸ್ಥೆಗೆ ಸಲ್ಲುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜನೆಗೊಂಡ ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ ಸಂಸ್ಥೆಯ (ಕ್ಯಾಂಪ್ಕೋ) ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದರಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ (Amit shah in Karavali) ಭಾಗವಹಿಸಿದ್ದರು.
೧೯೭೩ರಲ್ಲಿ ಸ್ಥಾಪನೆಯಾದ ಸಂಸ್ಥೆ ಅಡಕೆ ಮಾರುಕಟ್ಟೆಗೆ ದೊಡ್ಡ ಮಟ್ಟದ ರಕ್ಷಣೆ ನೀಡಿದೆ. ೧೯೮೦ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಕೋ ಕುಸಿದಾಗ ಚಾಕೊಲೇಟ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಬೆಳೆಗಾರರನ್ನು ಕಾಪಾಡಿತು. ಇವತ್ತು ದೇಶದಲ್ಲೇ ಅತ್ಯಧಿಕ ಅಂದರೆ ೨೬ ಸಾವಿರ ಮೆಟ್ರಿಕ್ ಟನ್ ಚಾಕೊಲೇಟ್ ಉತ್ಪಾದಿಸುವ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು ಬೊಮ್ಮಾಯಿ.
ಕಾಳುಮೆಣಸು, ಅಡಕೆ, ಕೋಕೊ ಸೇರಿದಂತೆ ಕೃಷಿಕರ ಎಲ್ಲ ವಸ್ತುಗಳಿಗೆ ಮಾರುಕಟ್ಟೆ ರಕ್ಷಣೆ ನೀಡುವ ಮೂಲಕ ತಾಯಿಯಾಗಿ ಪೊರೆಯುತ್ತಿದೆ ಎಂದು ಕ್ಯಾಂಪ್ಕೋವನ್ನು ಹೊಗಳಿದರು. ವಾರಾಣಸಿ ಸುಬ್ರಾಯ ಭಟ್ ಆದಿಯಾಗಿ ಇದುವರೆಗೆ ಸಂಸ್ಥೆಯನ್ನು ಮುನ್ನಡೆಸಿದ ವ್ಯಕ್ತಿಗಳ ಬದ್ಧತೆಯಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅಡಕೆ ಸಂವರ್ಧನೆ, ಅದನ್ನು ಬಾಧಿಸುವ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಮುಂದಿ ಬಜೆಟ್‌ನಲ್ಲಿ ಅಡಕೆ ಕುರಿತ ಸಂಶೋಧನೆಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ʻʻರಾಜ್ಯದಲ್ಲಿ ಅಡಕೆ ಬೆಳೆಯುವ ಪ್ರದೇಶ ವಿಸ್ತರಣೆಯಾಗುತ್ತಿದೆ. ಈಗ ನಮ್ಮ ಭಾಗದಲ್ಲೂ (ಹಾವೇರಿ) ಅಡಕೆ ಬೆಳೆ ಆರಂಭವಾಗಿದೆ. ಒಟ್ಟಾರೆ ಬೆಳೆ ಪ್ರದೇಶ ೬.೧೧ ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚಾಗಿದೆ. ಕೃಷಿ ಕ್ಷೇತ್ರ ಹೆಚ್ಚುವ ಜತೆಗೆ ಸವಾಲುಗಳು ಕೂಡಾ ಹೆಚ್ಚಿವೆ. ಎಲೆ ಚುಕ್ಕಿ ರೋಗ ಈಗ ದೊಡ್ಡ ಸಮಸ್ಯೆಯಾಗಿದೆ. ಇದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ೧೦ ಕೋಟಿ ರೂ.ಯನ್ನು ನೀಡಿದ್ದೇವೆ. ಇದರ ಜತೆಗೆ ಅಡಿಕೆ ಬೆಳೆ ಸಂಶೋಧನೆಗಾಗಿ ವಿಶೇಷ ಅನುದಾನವನ್ನು ನೀಡಲಾಗುವುದುʼʼ ಎಂದು ಅವರು ಪ್ರಕಟಿಸಿದರು.
ಅಡಕೆ ಬೆಳೆಗಾರರ ಭೂಮಿ ಸಮಸ್ಯೆ ಪರಿಹಾರ
ʻʻಅಡಕೆ ಬೆಳೆಗಾರರು ಕಾಣೆ, ಬಾಣೆ, ಸೊಪ್ಪಿನ ಬೆಟ್ಟದಲ್ಲೂ ಕೃಷಿ ಮಾಡಿದ್ದಾರೆ. ಇದು ಸಮಸ್ಯೆಯಾಗಿದ್ದು, ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ಕಂದಾಯ ಇಲಾಖೆಯ ಮೂಲಕ ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಒದಗಿಸುತ್ತೇವೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ ಮಾದರಿಯಲ್ಲೇ ಕಾಣೆ, ಬಾಣೆ, ಸೊಪ್ಪಿನ ಗುಡ್ಡದ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆʼʼ ಎಂದು ಅವರು ಹೇಳಿದರು.
ನಾವೇ ಪರಿಹಾರ ಕೊಡಬೇಕು, ನೀವು ನಮ್ಮವರು
ʻʻಅಡಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ನಾವೇ ಕೊಡಬೇಕು, ಬೇರೆ ಯಾರೂ ಕೊಡಲ್ಲ. ಯಾಕೆಂದರೆ ನೀವೆಲ್ಲ ನಮ್ಮವರು, ಬಧ್ಧತೆ ಇರುವುದು ನಮಗೆ ಮಾತ್ರʼʼ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸಿ ಎಂದು ಸಂದೇಶ ರವಾನಿಸಿದರು.
ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ಸಹಕಾರ ಸಚಿವ ಸೋಮಶೇಖರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು.