ರಿಪ್ಪನ್‌ಪೇಟೆ: ಇದೊಂದು ಮೊಟ್ಟೆಗಳ ಕಥೆ. ಪ್ರಾಣಿಗಳು, ಸರೀಸೃಪಗಳು ಆಹಾರ ಹುಡುಕಿಕೊಂಡು ಎಲ್ಲಿಗಾದರೂ ಹೋಗಿಬಿಡುತ್ತವೆ. ಅದೇ ರೀತಿಯಲ್ಲಿ ನಾಗರ ಹಾವೊಂದು ಆಹಾರ ಹುಡುಕಿಕೊಂಡು ಕೋಳಿ ಗೂಡಿನೊಳಗೇ ಹೋಗಿ ಬಂಧಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ವಡಾಹೊಸಳ್ಳಿಯಲ್ಲಿ ನಡೆದಿದೆ. ಈಗ ಈ ವಿಡಿಯೊ ವೈರಲ್ (Video Viral) ಆಗಿದೆ.
ವಡಾಹೊಸಳ್ಳಿ ಅಂಗನವಾಡಿಯ ಕಾರ್ಯಕರ್ತೆಯಾಗಿರುವ ಸುಶೀಲ ಎನ್ನುವವರು ಮನೆಯಲ್ಲಿ ಕೋಳಿ ಗೂಡನ್ನು ಇಟ್ಟುಕೊಂಡಿದ್ದರು. ಈ ಕೋಳಿಗೂಡಿಗೆ ಬುಧವಾರ ನಾಗರ ಹಾವೊಂದು ನುಗ್ಗಿದೆ. ಕೋಳಿ ಗೂಡಿನಲ್ಲಿ ಮೊಟ್ಟೆಗಳು ಇರಬಹುದು ಎನ್ನುವ ನಿರೀಕ್ಷೆಯಿಂದ ಹಾವು ಅಲ್ಲಿಗೆ ನುಗ್ಗಿದೆ. ಆದರೆ ಅಲ್ಲಿಂದ ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡು ಪೇಚಾಡಿದೆ.
ಇದನ್ನೂ ಓದಿ: Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಹಾವು ಕಂಡರೆ ಮಾರು ದೂರ ಓಡುವ ಈ ಕಾಲದಲ್ಲಿ ಹಾವೊಂದು ತಮ್ಮ ಮನೆಯ ಕೋಳಿ ಗೂಡಿಗೇ ನುಗ್ಗಿರುವುದನ್ನು ಕಂಡು ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಹೆಡೆ ಬಿಚ್ಚಿ ಕುಳಿತಿದ್ದ ಹಾವನ್ನು ಕಂಡು ಹೆದರಿಕೆಯಿಂದ ರಿಪ್ಪನ್‌ಪೇಟೆಯ ಉರಗತಜ್ಞ ಗಂಗಾಧರ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗಂಗಾಧರ ಅವರು ಹಾವನ್ನು ಹಿಡಿದಿದ್ದು, ಕಾಡಿನಲ್ಲಿ ಬಿಟ್ಟಿದ್ದಾರೆ.