Site icon Vistara News

Cobras Trapped: ಮನೆಯೊಂದರಲ್ಲಿ ಕಂಡು ಬಂತು ಮೂರು ನಾಗರ ಹಾವು; ರಕ್ಷಿಸಿ ಕಾಡಿನೊಳಗೆ ಬಿಟ್ಟ ಉರಗ ರಕ್ಷಕ

Cobras Trapped karwar

#image_title

ಕಾರವಾರ: ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎಂಬುವವರ ಮನೆಯಲ್ಲಿ 3 ನಾಗರ ಹಾವುಗಳು (Cobras Trapped) ಏಕಕಾಲದಲ್ಲಿ ಕಾಣಿಸಿಕೊಂಡಿದ್ದವು. ಹಾವುಗಳನ್ನು ಕಂಡು ಭಯಭೀತರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಆನಂದ ಬಜರಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ, 3 ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿನಲ್ಲಿ ಒಂದೇ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ. ಅರಣ್ಯ ಇಲಾಖೆಯ ಉರಗ ರಕ್ಷಕ ಬಿಲಾಲ್ ಶೇಖ್ ಅವರು ಕಳೆದ 26 ದಿನಗಳಲ್ಲಿ ಕದ್ರಾ ವಲಯದ ಮಲ್ಲಾಪುರದ ವಿವಿಧ ಮನೆಗಳಲ್ಲಿ ಒಟ್ಟು 6 ನಾಗರ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅವುಗಳ ಆವಾಸಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: Karnataka Election 2023: ಚಾಮುಂಡೇಶ್ವರಿಯಲ್ಲಿ ಜಿಟಿಡಿ ಹಣಿಯಲು ಸಿದ್ದರಾಮಯ್ಯ ಮಾಸ್ಟರ್‌ ಪ್ಲ್ಯಾನ್;‌ ಜಾತಿ ಅಸ್ತ್ರ ಪ್ರಯೋಗ

ಒಂದೇ ಮನೆಯಲ್ಲಿ ರಕ್ಷಿಸಿದ 3 ನಾಗರ ಹಾವುಗಳ ಪೈಕಿ ಒಂದು ಹೆಣ್ಣು, ಎರಡು ಗಂಡು ಹಾವುಗಳಾಗಿದ್ದವು. ಇದು ನಾಗಗಳ ಮಿಲನ ಋತುವಾಗಿರುವುದರಿಂದ ಒಂದು ಹೆಣ್ಣು ನಾಗರ ಇರುವ ಸ್ಥಳದಲ್ಲಿ ಎರಡರಿಂದ ಮೂರು ಗಂಡು ನಾಗಗಳಿರುವುದು ಸಾಮಾನ್ಯ. ಮಿಲನ ಋತುವಿನ ಸಮಯದಲ್ಲಿ ಹೆಣ್ಣು ನಾಗಗಳು ಸ್ರವಿಸುವ ಫೆರಮನ್ ವಾಸನೆಯ ಜಾಡನ್ನು ಗಂಡು ನಾಗಗಳು ಅನುಸರಿಸಿ ನಾಗಿಣಿಯನ್ನು ಸೇರುತ್ತವೆ. ಈ ಸಂದರ್ಭದಲ್ಲಿ ಗಂಡು ನಾಗಗಳ ಮಧ್ಯೆ ಕಾದಾಟ ನಡೆಯುವ ಸಾಧ್ಯತೆಯೂ ಉಂಟು. ಈ ವೇಳೆ ಬಲಿಷ್ಠ ನಾಗವು ಗೆದ್ದು ನಾಗಿಣಿಯನ್ನು ಸೇರುತ್ತದೆ ಎಂದು ಉರಗ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Tripura Election Result: ತ್ರಿಪುರಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾಣಿಕ್ ಸಾಹಾ

ಸ್ಥಳೀಯ ಜನರು ನಾಗರ ಹಾವುಗಳು ಪದೇ ಪದೆ ಗೋಚರಿಸುತ್ತಿರುವುದರಿಂದ ಆತಂಕಗೊಂಡಿದ್ದಾರೆ. ದೇವರು ಕೋಪಗೊಂಡಿದ್ದಾನೆ ಎಂದು ಪೂಜೆ- ಪುನಸ್ಕಾರಗಳ ಮೊರೆ ಹೋಗಿದ್ದಾರೆ. ಮಿಲನ ಋತುವಿನಲ್ಲಿ ನಾಗಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುವುದರಿಂದ ಈ ಋತುವಿನಲ್ಲಿ ಪದೇ ಪದೆ ಗೋಚರಿಸುವುದು ಸಾಮಾನ್ಯ. ಇದು ನಿಸರ್ಗದಲ್ಲಿನ ಸಹಜ ಕ್ರಿಯೆ ಎಂದು ಜೀವಿವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದ್ದಾರೆ.

Exit mobile version