Site icon Vistara News

Coin Collection | ತಿರಸ್ಕಾರವನ್ನೇ ಛಲವಾಗಿ ಸ್ವೀಕರಿಸಿ ನಾಣ್ಯ ಸಂಗ್ರಹವನ್ನೇ ಹವ್ಯಾಸವಾಗಿಸಿಕೊಂಡ ಕೃಷಿಕ

Chidanada Hegde coin collection farmer

ಎಸ್‌ ಎಸ್‌ ಸಂದೀಪ್‌ ಸಾಗರ, ಕಾರವಾರ
ನಿತ್ಯದ ಕೆಲಸ ಕಾರ್ಯಗಳ ನಡುವೆಯೂ ಬಹುತೇಕರು ಒಂದಲ್ಲ ಒಂದು ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಹವ್ಯಾಸಗಳನ್ನು ರೂಢಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಒಳ್ಳೆಯ ಹವ್ಯಾಸಗಳಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದರಂತೆ ಇಲ್ಲೊಬ್ಬ ಕೃಷಿಕರು ಬಾಲ್ಯದಿಂದಲೇ ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹಕ್ಕೆ ಬಿದ್ದು ಚೋಳರ, ಗಂಗರ ಗಕಾಲದ ನಾಣ್ಯಗಳನ್ನು (Coin Collection) ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರದರ್ಶನ ಮಾಡುತ್ತಿದ್ದಾರೆ.

ಈ ಹವ್ಯಾಸವನ್ನು ರೂಢಿಸಿಕೊಂಡವರೇ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಮದ ಕೃಷಿಕ ಚಿದಾನಂದ ಹೆಗಡೆ. ಅವರು ಗತಕಾಲದಿಂದ ಹಿಡಿದು ಪ್ರಸ್ತುತವರೆಗಿನ ಸಾವಿರಾರು ನಾಣ್ಯಗಳನ್ನು ಸಂಗ್ರಹಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾಲಾ ದಿನಗಳಲ್ಲಿ ಎನ್ಎಸ್ಎಸ್ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಯೊಬ್ಬ ಬೆಳ್ಳಿ ನಾಣ್ಯ ಮುಟ್ಟಲು ಬಿಡದಿರುವುದನ್ನೇ ಛಲವಾಗಿ ಸ್ವೀಕರಿಸಿದ ಚಿದಾನಂದ ಹೆಗಡೆ ಅವರು ಇದೀಗ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಳೆಯ ಕಾಲದ ನಾಣ್ಯಗಳ ಕಣಜವನ್ನೇ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಕ್ರಿಸ್ತಶಕ 950ರ ಚೋಳರ ಕಾಲದ ಚಿನ್ನದ ಕಿರು ನಾಣ್ಯದಿಂದ ಹಿಡಿದು ವಿಜಯನಗರದ ಕಾಲದ ವರಹಗಳು, ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ್ದ ಪೈಸೆಗಳೂ ಇವರ ಬಳಿ ಇವೆ. ಭಾರತೀಯ ನಾಣ್ಯದ ಜತೆಗೆ ದೇಶ-ವಿದೇಶಗಳ ನಾಣ್ಯಗಳೂ ಇವರ ಬಳಿ ಇವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ ಹೀಗೆ ನೂರಾರು ದೇಶಗಳ ನಾಣ್ಯಗಳನ್ನು ಇವರು ಜತನದಿಂದ ಕಾಯ್ದುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಉಚಿತ ಪ್ರದರ್ಶನ
ಇನ್ನು ಕೇವಲ ನಾಣ್ಯಗಳು ಮಾತ್ರವಲ್ಲದೇ ಹಳೆಯ ಕಾಲದ ಭಾರತೀಯ ಹಾಗೂ ವಿದೇಶಿ ನೋಟುಗಳು, ಅಂಚೆ ಸ್ಟಾಂಪ್‌ಗಳನ್ನೂ ಸಂಗ್ರಹಿಸಿದ್ದಾರೆ. ಇವರು ಮೊದಲೆಲ್ಲ ಸಾರ್ವಜನಿಕ ಕಾರ್ಯಕ್ರಮ, ಉತ್ಸವಗಳಿಗೆ ತೆರಳಿ, ಪ್ರದರ್ಶನ ನೀಡಿ ಜನರಿಗೆ ಉಚಿತವಾಗಿ ಮಾಹಿತಿ ಕೊಡುವ ಕಾರ್ಯ ಮಾಡುತ್ತಿದ್ದರು. ಆದರೆ, ಇದೀಗ ವಯಸ್ಸಾದ ಕಾರಣ ಹಾಗೂ ನಾಣ್ಯಗಳು ಹಾಳಾಗುವ ಅಥವಾ ಕದಿಯುವ ಆತಂಕದಿಂದಾಗಿ ಶಾಲೆಗಳಿಂದ ಆಹ್ವಾನ ಬಂದರೆ ಮಾತ್ರ ತೆರಳಿ ಉಚಿತವಾಗಿ ಪ್ರದರ್ಶನ ನೀಡಿ ಬರುತ್ತಿದ್ದಾರೆ. ತುಂಬಾ ಪುರಾತನ ನಾಣ್ಯಗಳು ಇರುವ ಕಾರಣ ವಿದ್ಯಾರ್ಥಿಗಳಲ್ಲಿಯೂ ಕುತೂಹಲ ಇದೆ.

ಇದನ್ನೂ ಓದಿ | ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್​ ಮಾಜಿ ಸಚಿವ ಬಂಧನರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್​ ಮಾಜಿ ಸಚಿವ ಬಂಧನ

ಇನ್ನು ಚಿದಾನಂದ ಅವರ ಬಳಿ ಇರುವ ಮತ್ತೊಂದು ವಿಶಿಷ್ಟ ಸಂಗ್ರಹವೊಂದಕ್ಕೆ ರೆಕಾರ್ಡ್ ಕೂಡ ಪಡೆದಿದ್ದಾರೆ. ಇವರ ತೋಟದಲ್ಲಿ ಬೆಳೆದ 10.6 ಸೆಂ.ಮೀ. ಸುತ್ತಳತೆಯ, 4 ಸೆಂ.ಮೀ. ಉದ್ದದ ಅಡಕೆಯೊಂದು ದೇಶದ ಅತಿದೊಡ್ಡ ಅಡಕೆ ಎಂಬ ಹೆಗ್ಗಳಿಕೆ ಪಡೆದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಇದಲ್ಲದೆ ಮೂರು ಕಣ್ಣಿನ ಅಡಕೆ ಕೂಡ ಇದ್ದು 25 ವರ್ಷಗಳಿಂದ ಜೋಪಾನ ಮಾಡಿಕೊಂಡು ಬಂದಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೇ ನಾಣ್ಯ ಸಂಗ್ರಹವನ್ನು ಹವ್ಯಾಸ ಮಾಡಿಕೊಂಡಿರುವ ಇವರು, ಕೃಷಿ ಕೆಲಸ ಕಾರ್ಯಗಳಲ್ಲೂ ಭಾಗಿಯಾಗುತ್ತಿದ್ದರು. ಈ ನಡುವೆಯೂ ಸಾವಿರಾರು ನಾಣ್ಯಗಳನ್ನು ಸಂಗ್ರಹಿಸಿ ಜೋಪಾನ ಮಾಡಿದ್ದಾರೆ.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕೊಪ್ಪಳ | ಕರಡಿ ವರ್ಸಸ್ ಹಿಟ್ನಾಳ್ ಫೈಟ್‌ ನಡುವೆ ಮೂರನೆಯವರ ಎಂಟ್ರಿ ಆಗಬಹುದೇ?

Exit mobile version