Site icon Vistara News

Colors Kannada: ಗುಡ್ ಆಫ್ಟರ್‌ನೂನ್ ಕರ್ನಾಟಕ; ಮೇ 22ರಿಂದ ಮಧ್ಯಾಹ್ನಗಳನ್ನು ರಂಗೇರಿಸುತ್ತಿದೆ ಕಲರ್ಸ್ ಕನ್ನಡ

Colors Kannada channel's afternoon entertainment show

Colors Kannada channel's afternoon entertainment show

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯು ಮಧ್ಯಾಹ್ನದ ಮನರಂಜನೆಯ ಶೋಗಳನ್ನು ಆರಂಭಿಸಲಿದ್ದು, ಇನ್ನು ಮುಂದೆ ನಿಮ್ಮ ಮಧ್ಯಾಹ್ನಗಳು ಆಕಳಿಕೆ, ತೂಕಡಿಕೆಯಲ್ಲಿ ಕಳೆದು ಹೋಗುವುದಿಲ್ಲ. ಮಧ್ಯಾಹ್ನದ ಪ್ರಸಾರಕ್ಕೆಂದೇ ಮೂರು ಒರಿಜಿನಲ್ ಶೋಗಳನ್ನು ಕಲರ್ಸ್ ಕನ್ನಡ ರೂಪಿಸಿದ್ದು, ಇವು ಮೇ 22ರಿಂದ ಪ್ರಸಾರವಾಗಲಿವೆ.

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗೆ ಶುರುವಾಗಲಿರುವ ವಿಶೇಷ ಮನರಂಜನೆಯ ಪ್ರಸಾರದಲ್ಲಿ ಹೊಸ ಧಾರಾವಾಹಿಗಳ ಜತೆಗೆ ಶಾಂತಂ ಪಾಪಂನ ಹೊಸ ಸೀಸನ್ ಕೂಡ ಮೂಡಿ ಬರಲಿದೆ. ‘ಗೃಹಪ್ರವೇಶ’ ಮತ್ತು ʼಗಂಡ ಹೆಂಡ್ತಿʼ ಇವೆರೆಡೂ ಹೊಸದಾಗಿ ಶುರುವಾಗುತ್ತಿರುವ ಧಾರಾವಾಹಿಗಳಾದರೆ, ಸುತ್ತಲಿನ ಅಪಾಯಗಳ ಬಗ್ಗೆ ನಮ್ಮನ್ನು ಜಾಗೃತಗೊಳಿಸುವ ‘ಶಾಂತಂ ಪಾಪಂ’ ಕತೆಗಳು ಈಗ ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲು ಸಿದ್ಧವಾಗಿವೆ.

ʼಬಣ್ಣ ಬದಲಾಗಿದೆ ಬಂಧ ಬಿಗಿಯಾಗಿದೆʼ ಎಂಬ ನಮ್ಮ ಚಾನೆಲ್‌ನ ಘೋಷವಾಕ್ಯಕ್ಕೆ ಸರಿ ಹೊಂದುವಂತೆ ಕಲರ್ಸ್ ಕನ್ನಡ ಮಧ್ಯಾಹ್ನದ ಮನರಂಜನೆ ಕಾರ್ಯಕ್ರಮಗಳನ್ನು ಆರಂಭಿಸುತ್ತಿದೆ. ಈ ಹೊಸ ಹೆಜ್ಜೆಯಿಂದ ವೀಕ್ಷಕರ, ಅದರಲ್ಲೂ ಗೃಹಿಣಿಯರ, ಮಧ್ಯಾಹ್ನಗಳು ಹೊಸ ರಂಗು ಪಡೆಯಲಿವೆ ಎಂಬ ಭರವಸೆ ನನಗಿದೆ ಎಂದು ಕಲರ್ಸ್ ಕನ್ನಡದ ಮುಖ್ಯಸ್ಥರಾದ ಪ್ರಶಾಂತ್ ನಾಯಕ್ ಹೇಳುತ್ತಾರೆ.

ಇದನ್ನೂ ಓದಿ | ARM Teaser: ಮಲಯಾಳಿ ಹಿರೋನ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ನಟ ರಕ್ಷಿತ್ ಶೆಟ್ಟಿ

ಕಲರ್ಸ್ ಕನ್ನಡದ ಎಲ್ಲ ತಾರೆಯರೂ ಜತೆಗೂಡಿ ಈ ಮಧ್ಯಾಹ್ನದ ಕಾರ್ಯಕ್ರಮಗಳ ಬಗ್ಗೆ ಮಾಡಿದ ಪ್ರೊಮೊ ಈಗಾಗಲೇ ಜನಪ್ರಿಯವಾಗಿದೆ. ಅವುಗಳಿಗೆ ರಾಜ್ಯದ ಎಲ್ಲೆಡೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಚಾನೆಲ್ಲಿನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ‘ಬಣ್ಣ ಬದಲಾಗಿದೆ ಬಂಧ ಬಿಗಿಯಾಗಿದೆ’ ಎಂಬ ಕಲರ್ಸ್ ಕನ್ನಡದ ಘೋಷವಾಕ್ಯಕ್ಕೆ ಈಗ ಹೊಸ ಅರ್ಥ ಬಂದಂತಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಟಿವಿ ಎಂದರೆ ಸಂಜೆ ಐದರ ನಂತರ ಎಂಬಂತಿದ್ದ ದಿನಗಳು ಮುಗಿಯಲಿವೆ. ಇನ್ನು ಮುಂದೆ ಮಧ್ಯಾಹ್ನದಿಂದಲೇ ಮನರಂಜನೆಯ ಸಮಯ ಶುರುವಾಗಲಿದೆ. ಇದು ವೀಕ್ಷಕರ ಪಾಲಿಗಂತೂ ಸಂತಸದ ವಿಷಯವೇ. ನೆನಪಿರಲಿ, ಇದರಿಂದ ನಿಮ್ಮ ಮಧ್ಯಾಹ್ನದ ಕಿರುನಿದ್ದೆಗೆ ಒಂದಷ್ಟು ಸಂಚಕಾರ ಬಂದರೆ ಅದಕ್ಕೆ ಚಾನೆಲ್ ಹೊಣೆಯಲ್ಲ!

ಗೃಹ ಪ್ರವೇಶ

ಅಪ್ಪನನ್ನು ಹುಡುಕಿಕೊಂಡು ಬರುವ ಮಗಳೊಬ್ಬಳ ಕಥಾನಕವೇ ‘ಗೃಹಪ್ರವೇಶ’. ಇದು ಮಧ್ಯಾಹ್ನದ ಪ್ರಸಾರದಲ್ಲಿ ಮೂಡಿಬರುತ್ತಿರುವ ಮೊದಲ ಧಾರಾವಾಹಿ. ಹುಟ್ಟಿದಾಗಿನಿಂದ ತಂದೆಯ ಪ್ರೀತಿಯನ್ನೇ ಕಾಣದ ಹುಡುಗಿಗೆ ತನ್ನ ಜನ್ಮರಹಸ್ಯ ತಿಳಿದು ಬೇರೆಲ್ಲೊ ಇರುವ ಅಪ್ಪನನ್ನು ಹುಡುಕಿಕೊಂಡು ಬರುತ್ತಾಳೆ. ಆದರೆ, ಅಮ್ಮನಿಗೆ ಕೊಟ್ಟ ಮಾತಿನಂತೆ ಅಪ್ಪನನ್ನು ಮರಳಿ ಅಮ್ಮನ ಮನೆಗೆ ಕರೆತರುವುದು ಅವಳಂದುಕೊಂಡಷ್ಟು ಸರಳವೇ? ಮಗಳೊಬ್ಬಳ ಒದ್ದಾಟದ ಮನಮಿಡಿಯುವ ಕತೆಯನ್ನು ನೀವು ಈ ಧಾರಾವಾಹಿಯಲ್ಲಿ ನೋಡಬಹುದು. ನಟ, ನಿರ್ಮಾಪಕ ಜಗನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಪ್ರಸಾರದ ಸಮಯ: ಸೋಮವಾರದಿಂದ ಶನಿವಾರ ಪ್ರತಿ ಮಧ್ಯಾಹ್ನ 2 ಗಂಟೆ

ಗಂಡ ಹೆಂಡ್ತಿ

ಕಲರ್ಸ್ ಕನ್ನಡದ ಮಧ್ಯಾಹ್ನದ ಪ್ರಸಾರದ ಎರಡನೇ ಒರಿಜಿನಲ್ ಶೋ ‘ಗಂಡ-ಹೆಂಡತಿ’. ಈ ಧಾರಾವಾಹಿಯ ಕತೆಯೇ ವಿಶೇಷವಾದದ್ದು. ಆತ್ಮೀಯ ಸ್ನೇಹಿತರಾದ ಮುರಳಿ ಮತ್ತು ಸ್ವಾತಿ ಅನಿರೀಕ್ಷಿತ ಸಂದರ್ಭವೊಂದು ಎದುರಾದಾಗ ವಿಧಿಯಿಲ್ಲದೆ ಮದುವೆಯಾಗಬೇಕಾಗುತ್ತದೆ. ಆ ಸಂದರ್ಭ ಎಂಥದ್ದು? ನವಿರು ಭಾವನೆಗಳೇ ಇಲ್ಲದ ಇಬ್ಬರು ಹುಡುಗ ಹುಡುಗಿ ಮುಂದೆ ಗಂಡ ಹೆಂಡತಿಯಾಗಿ ಬಾಳುವುದು ಸಾಧ್ಯವಾಯಿತೇ ಎಂಬ ಹೃದಯಸ್ಪರ್ಶಿ ಕತೆ ಈ ಧಾರಾವಾಹಿಯದ್ದು.

ಈಗಾಗಲೇ ಹಲವು ಸೂಪರ್ ಹಿಟ್ ಸೀರಿಯಲ್‌ಗಳನ್ನು ನಿರ್ದೇಶಿಸಿರುವ ರಾಮ್‌ಜಿ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಪುಟ್ಟಗೌರಿ ಮದುವೆ, ಅಕ್ಕ, ಗೀತಾ, ರಾಮಾಚಾರಿಯಂಥ ಹಲವು ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ರಾಮ್‌ಜಿ ಕತೆಗಳೆಂದರೆ ಮನಸ್ಸನ್ನು ತಟ್ಟುವ ಭಾವುಕ ಸನ್ನಿವೇಶಗಳಿಗಂತೂ ಕೊರತೆಯಿರುವುದಿಲ್ಲ ಎಂದು ಕನ್ನಡ ಟಿವಿ ನೋಡುಗರಿಗೆ ತಿಳಿದಿದೆ. ಗಂಡ ಹೆಂಡತಿ ಆ ನಿರೀಕ್ಷೆಯನ್ನು ಮತ್ತೊಂದು ಎತ್ತರಕ್ಕೆ ಒಯ್ಯಲಿದೆ.

ಪ್ರಸಾರದ ಸಮಯ: ಸೋಮವಾರದಿಂದ ಶನಿವಾರ ಪ್ರತಿ ಮಧ್ಯಾಹ್ನ 2:30

ಇದನ್ನೂ ಓದಿ | Video: ಹಾರರ್​ ದೃಶ್ಯಗಳು, ಜತೆಗೊಂದಿಷ್ಟು ರೊಮ್ಯಾನ್ಸ್​​; ರಾಘಣ್ಣ ಅಭಿನಯದ ಸ್ತಬ್ಧ ಚಿತ್ರದ ಟೀಸರ್​ ರಿಲೀಸ್​

ಶಾಂತಂ ಪಾಪಂ

ಕಲರ್ಸ್ ಕನ್ನಡದ ಮಧ್ಯಾಹ್ನದ ಮನರಂಜನೆ ಎಂದರೆ ಬಗೆಬಗೆಯ ತಿನಿಸುಗಳ ಬುಟ್ಟಿ. ಎರಡು ಸೀರಿಯಲ್‌ಗಳನ್ನು ನೋಡಿದ ಬಳಿಕ ನಿಮ್ಮನ್ನು ವಾಸ್ತವಕ್ಕೆ ಎಳೆದು ತರಲಿದೆ ‘ಶಾಂತಂ ಪಾಪಂ’. ಇವು ಪಾಪದ ಕತೆಗಳಾದರೂ ಪಾಠ ಹೇಳುವ ಕತೆಗಳು. ಕತೆಯ ಮೂಲಕ ಎಚ್ಚರದ ಗಂಟೆ ಬಾರಿಸುವ ‘ಶಾಂತಂ ಪಾಪಂ’ ನಿಮಗೆ ಪರಿಚಯ ಇರುವ ಕಾರ್ಯಕ್ರಮವೇ ಆದರೂ ಈ ಐದನೇ ಸೀಸನ್ ಹಲವು ಹೊಸತುಗಳನ್ನು ಹೊತ್ತು ತರಲಿದೆ. ವೀಕ್ಷಕರು ಅದರಲ್ಲೂ ಮಹಿಳೆಯರು ಸುತ್ತಮುತ್ತಲಿನ ಅಪರಾಧ ಕೃತ್ಯಗಳ ಬಗ್ಗೆ ವಹಿಸಬೇಕಾದ ಜಾಗರೂಕತೆಯ ಬಗ್ಗೆ ಪಾಠ ಹೇಳುವುದು ಈ ಶೋನ ಹೆಗ್ಗಳಿಕೆ. ಮನಸ್ಸನ್ನು ಕೆರಳಿಸುವ ಕ್ರೈಂ ವೈಭವೀಕರಣವನ್ನು ಮಾಡದೆ ಕ್ಷೇಮದಿಂದ ಬದುಕುವ ಅರಿವು ಮೂಡಿಸುವುದಕ್ಕೇ ನಮ್ಮ ಪ್ರಾಶಸ್ತ್ಯ. ಪ್ರಸಿದ್ಧ ನಟ ನಟಿಯರು ಕತೆಗಳನ್ನು ನಿರೂಪಿಸುವುದು ಶಾಂತಂ ಪಾಪಂನ ಮತ್ತೊಂದು ವಿಶೇಷ ಅಂಶ.

ಪ್ರಸಾರ ಸಮಯ: ಸೋಮವಾರದಿಂದ ಶನಿವಾರ ಮಧ್ಯಾಹ್ನ 3 ಗಂಟೆ.

Exit mobile version