ಬೆಂಗಳೂರು: ಸಿಲಿಕಾನ್ ಸಿಟಿ ಜನರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ರೈಲು ಸೇವೆಗೆ (Namma Metro) ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಸಿರು ನಿಶಾನೆ ತೋರಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ಮಾರ್ಚ್ 26ರ ಬೆಳಗ್ಗೆ 7 ಗಂಟೆಯಿಂದ ವಾಣಿಜ್ಯ ಸೇವೆ ಆರಂಭವಾಗಲಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಟಣೆ ನೀಡಿದ್ದು, ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮೊದಲ ರೈಲು ಸಂಚಾರ ಆರಂಭವಾಗಲಿದ್ದು, ಎರಡೂ ಟರ್ಮಿನಲ್‌ಗಳಿಂದ ರಾತ್ರಿ 11 ಗಂಟೆಗೆ ರೈಲು ಸೇವೆ ಕೊನೆಯಾಗಲಿದೆ. ಹಾಗೆಯೇ ಸೋಮವಾರದಿಂದ ಎಂದಿನಂತೆ ಮುಂಜಾನೆ 5 ಗಂಟೆಯಿಂದ ರಾತ್ರಿ 11ರ ವರೆಗೂ ಮೆಟ್ರೋ ಸೇವೆ ಇರಲಿದೆ ಎಂದು ಮಾಹಿತಿ ನೀಡಿದೆ.
ಮೆಟ್ರೋ ಪ್ರಯಾಣಿಕರಿಗೆ ಟೋಕನ್, ಮೊಬೈಲ್ ಕ್ಯೂ ಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿಗೆ ಹೋಗುವ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 30ರಿಂದ ಮೆಟ್ರೋ ನಿಲ್ದಾಣದಲ್ಲಿ ಆರ್‌ಬಿಎಲ್ ಬ್ಯಾಂಕ್ ರುಪೇ, ಎನ್‌ಸಿಎಂಸಿ ಕಾರ್ಡ್ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ 2ನೇ ಹಂತದ ರೀಚ್-1 ವಿಸ್ತರಣಾ ಯೋಜನೆಯ ಭಾಗವಾಗಿ ಸುಮಾರು 4.5 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ವಿಸ್ತರಿತ ನೇರಳೆ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ನಡುವೆ ಸುಮಾರು 2 ಕಿ.ಮೀ. ಮೆಟ್ರೋ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾರ್ಗದಲ್ಲಿನ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣ ಕಾಮಗಾರಿ ಜೂನ್ ವೇಳೆಗೆ ಈ ಕಾಮಗಾರಿ ಮುಗಿಯಲಿದ್ದು, ನಂತರ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಏರ್ಪಡಲಿದೆ.
12 ನಿಲ್ದಾಣಗಳು, ಅನೇಕ ಪ್ರಯೋಜನಗಳು
ನಿರ್ಮಾಣ ಹಂತದಲ್ಲಿರುವ 15.81 ಕಿಲೋಮೀಟರ್ ವಿಸ್ತರಣೆಯಲ್ಲಿ 13.71 ಕಿಲೋಮೀಟರ್ ಭಾಗ ಮಾತ್ರ ಶನಿವಾರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ನೂತನ ಮಾರ್ಗದ ವಿಭಾಗವು ಬೈಯಪ್ಪನಹಳ್ಳಿಯಿಂದ- ವೈಟ್‌ಫೀಲ್ಡ್ ನಿಲ್ದಾಣದವರೆಗೆ ಕಾರ್ಯಾಚರಣೆಯಲ್ಲಿರುವ ಪೂರ್ವ-ಪಶ್ಚಿಮ ಕಾರಿಡಾರ್ನ ನೇರಳೆ ಮಾರ್ಗದ ಪೂರ್ವ ವಿಸ್ತರಣೆಯಾಗಿದೆ. ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ, ವೈಟ್ ಫೀಲ್ಡ್ (ಕಾಡುಗೋಡಿ) ಸೇರಿ ಒಟ್ಟು 12 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.
ಪ್ರತಿ 12 ನಿಮಿಷಕ್ಕೆ ಒಂದು ರೈಲು ಸಂಚಾರ
ಈ ಮಾರ್ಗದಲ್ಲಿ ಪ್ರತಿ 12 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಈ ವಿಸ್ತರಣೆಯಲ್ಲಿ ಗರಿಷ್ಠ ಟಿಕೆಟ್ ದರವು 35 ರೂ. ಆಗಿರಲಿದೆ. ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರಂ ನಡುವಿನ ಅಂತರವನ್ನು 22 ನಿಮಿಷಗಳಲ್ಲಿ ಕ್ರಮಿಸುತ್ತದೆ. ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರುಗೆ (ITPB) ನೇರ ಪ್ರವೇಶವನ್ನು ಒದಗಿಸಲು ITPLನೊಂದಿಗೆ BMRCL ಒಪ್ಪಂದಕ್ಕೆ ಸಹಿ ಹಾಕಿದೆ.
ದೆಹಲಿ ನಂತರ ದೇಶದಲ್ಲೇ 2ನೇ ಅತಿ ದೊಡ್ಡ ಮೆಟ್ರೋ ಜಾಲ
ದೇಶದಲ್ಲಿಯೇ ದೆಹಲಿ ನಂತರ ನಂತರ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿರುವ ನಗರವಾಗಿ ಬೆಂಗಳೂರು ಹೆಗ್ಗಳಿಕೆ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್ ಮೆಟ್ರೋ ಇತ್ತು. ಆದರೆ ಈಗ ಹೊಸ ಮಾರ್ಗ ಉದ್ಘಾಟನೆಯೊಂದಿಗೆ ಹೈದರಾಬಾದ್ ಅನ್ನು ಹಿಂದಿಕ್ಕಿ ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇಂದಿನಿಂದ ನಮ್ಮ ಮೆಟ್ರೋ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರವಾದಂತಾಗಿದೆ. ಇಂದಿನ 13.71 ಕಿಲೋಮೀಟರ್ ಮಾರ್ಗ ಸೇರಿ ಒಟ್ಟು 69.66 ಕಿಲೋಮೀಟರ್ ಮೆಟ್ರೋ ಜಾಲವನ್ನು ನಮ್ಮ ಮೆಟ್ರೊ ಹೊಂದಿದಂತಾಗಲಿದೆ.