ವಿಜಯನಗರ: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಣಿತ ವಾಸ್ತುಶಿಲ್ಪ ತಜ್ಞರಿಂದ 15 ದಿನದೊಳಗೆ ನೀಲಿನಕ್ಷೆ ಸಿದ್ಧಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಹೇಳಿದರು.
ಅಂಜನಾದ್ರಿ ಅಭಿವೃದ್ಧಿಗಾಗಿ ಈಗಾಗಲೇ ಮೊದಲ ಹಂತದ ಸಭೆ ನಡೆಸಿದ್ದೇವೆ. ಬಜೆಟ್‌ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ. ರೂಫ್ ವೇ ಸೇರಿ ರಸ್ತೆ ಮತ್ತಿತರ ಸೌಲಭ್ಯಕ್ಕೆ ನೀಲಿನಕ್ಷೆ ಸಿದ್ಧಪಡಿಸಲಾಗುತ್ತದೆ. ಅಂಜನಾದ್ರಿ ಬೆಟ್ಟದ ಸುತ್ತಮುತ್ತ ರೈತರ ಜಮೀನು ವಿಚಾರಕ್ಕೆ ವ್ಯಾಜ್ಯ ನಡೆದಿದೆ ಅನ್ನುವ ವಿಚಾರ ಬಂದಿದ್ದು, ಭೂ ಸ್ವಾದೀನಕ್ಕೆ ರೈತರೆಲ್ಲರೂ ಒಪ್ಪಿದ್ದಾರೆ. ರೈತರೇ ಸ್ವಯಂಪ್ರೇರಿತರಾಗಿ ಜಮೀನು ಕೊಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಸಿಎಂ ಸೂಚನೆಯಂತೆ ಕೊಪ್ಪಳದ ಅಂಜನಾದ್ರಿ ಕುರಿತಂತೆ ಸಭೆ ನಡೆಸಲಾಗಿದ್ದು, ಅಂಜನಾದ್ರಿಗೆ ಬರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಸೌಕರ್ಯ ಒದಗಿಸಬೇಕಿದೆ. ಅಲ್ಲಿ ಮೂಲಭೂತ ಸೌಕರ್ಯ ಒದಗಿಸಲು 60 ಎಕರೆ ಭೂಮಿ ಬೇಕಿದೆ. ಏನೇನು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸುತ್ತಾರೆ ಎಂದು ತಿಳಿಸಿದರು.
ಅಲ್ಲಿನ ಪ್ರಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಏಜೆನ್ಸಿ ಕರೆ ಮಾಡಲಾಗುತ್ತದೆ. ಈ ರೀತಿಯ ಯೋಜನೆಯನ್ನು ಕೇರಳದಲ್ಲೊಂದು ಏಜೆನ್ಸಿಯವರು ಮಾಡಿದ್ದಾರೆ. ಅಲ್ಲಿನ ವಾಸ್ತುಶಿಲ್ಪಿಗಳನ್ನು ನಾವು ಆಹ್ವಾನಿಸಿದ್ದೇವೆ. ನೀಲಿನಕ್ಷೆ ತಯಾರಿಸಿ ಸಿಎಂ ಗಮನಕ್ಕೆ ತಂದು ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ| ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಿಎಂ ಸಭೆ; ತ್ವರಿತ ಕ್ರಮಗಳಿಗೆ ಸೂಚನೆ