Site icon Vistara News

PES University: ಮೃತ ವಿದ್ಯಾರ್ಥಿಗೆ ಸಂತಾಪ ಇದೆ, ಅಪಪ್ರಚಾರ ಬೇಡ: ಪಿಇಎಸ್ ವಿವಿ

PES University Student Aditya Prabhu

ಬೆಂಗಳೂರು: ಕಾಲೇಜು ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಆದಿತ್ಯ ಪ್ರಭುಗೆ ಸಂತಾಪ ಸೂಚಿಸುತ್ತೇವೆ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿರುವ ಬಗ್ಗೆ ಕಾಲೇಜಿಗೂ ಅತೀವ ಬೇಸರ ಇದೆ. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ, ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗ ವಿದ್ಯಾರ್ಥಿ ಆತ್ಮಹತ್ಯೆಯ ಬಗ್ಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಪಿಇಎಸ್‌ ವಿಶ್ವವಿದ್ಯಾಲಯದ (PES University) ವಿಶೇಷಾಧಿಕಾರಿ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿತ್ಯ ಪ್ರಭು ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿದ್ದು, ಶೈಕ್ಷಣಿಕವಾಗಿಯೂ ಮುಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ಕೈಗೊಂಡಿದ್ದಕ್ಕೆ ಬೇಸರವೂ ಇದೆ. ಜುಲೈ 17ರಂದು ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಿದ್ದು, ಆ ವೇಳೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಮೇಲೆ ಪರೀಕ್ಷೆ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ, ಮೃತ ವಿದ್ಯಾರ್ಥಿಯ ತಾಯಿ ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಈ ವಿಚಾರವನ್ನು ಪ್ರಕರಣದ ತನಿಖಾ ಸಮಿತಿಯು ಸ್ವೀಕರಿಸಲಿದೆ. ಅವರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಆಯುರ್‌ಕೇರ್‌ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ

ತನಿಖೆ ಪ್ರಗತಿಯಲ್ಲಿರುವಾಗ ವಿಶ್ವವಿದ್ಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮೌನವಹಿಸಲಾಗಿತ್ತು. ಆದರೆ, ಮಾಧ್ಯಮಗಳಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ನಡೆಯ ನಾನಾ ಬಗೆಯ ವರದಿಗಳು ಬಂದಿರುವ ಕಾರಣ ಸ್ಪಷ್ಟನೆ ನೀಡುವುದು ವಿಶ್ವವಿದ್ಯಾಲಯಕ್ಕೆ ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯದ ಅಧಿಕಾರಿಗಳಿಗೂ ಹೃದಯವಿದೆ, ಮಾನವೀಯತೆ ಇದೆ. ಸಂಸ್ಥೆಯು ತಪ್ಪು ಮಾಡಿದಾಗ ಶಿಕ್ಷಿಸುವ ಕೆಲಸ ಮಾಡಿದೆಯೇ ಹೊರತು, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ವಿಚಾರಗಳನ್ನು ಬಹಿರಂಗವಾಗಿ ಹೇಳುವುದು ಕಾನೂನಿನ ಪ್ರಕಾರ ತಪ್ಪಾಗಲಿದೆ. ಆದರೆ, ಸತ್ಯಾಂಶವನ್ನು ವರದಿ ಮೂಲಕ ತನಿಖಾ ಸಮಿತಿಗೆ ಸಲ್ಲಿಸಿದ್ದೇವೆ. ಅದರಲ್ಲಿ ಪರೀಕ್ಷಾ ನಿಯಮ ಉಲ್ಲಂಘನೆ ನಡೆದ ವೇಳೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಾಲಕರ ಆರೋಪಗಳಿಂದ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ದುರಾಚಾರ ಘಟನೆ ಬಗ್ಗೆ ಪ್ರಾಧ್ಯಾಪಕರ ಮೇಲೆ ಆರೋಪ ಮಾಡಿ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ. ಇತರೆ ವಿದ್ಯಾರ್ಥಿಗಳು ಸಹ ಭಯದಲ್ಲಿರುವಂತಹ ವಾತಾವರಣಗಳನ್ನು ಮಾಧ್ಯಮ ಸೃಷ್ಟಿ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರನ್ನು ಒಳಗೊಳ್ಳದೆ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಪೂರ್ಣ

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಅವಲಂಬಿಸಿದೆ. ವಿದ್ಯಾರ್ಥಿಗಳೇ ಇಲ್ಲಿ ಪ್ರಭುಗಳು ಎಂಬ ಆದರ್ಶ ಇಟ್ಟುಕೊಂಡು ವಿಶ್ವವಿದ್ಯಾಲಯ ನಡೆಸಲಾಗುತ್ತಿದೆ. ಇದರಿಂದಲೇ ವಿಶ್ವವಿದ್ಯಾಲಯ ಈ ಮಟ್ಟಕ್ಕೆ ಬೆಳೆದಿದೆ. ವಿಶ್ವವಿದ್ಯಾಲಯ ಕೂಡ ಕಾನೂನಿನ ಮೇಲೆ ನಂಬಿಕೆ ಇಟ್ಟು ತನಿಖೆಗೆ ಸಹಕಾರ ನೀಡಲಿದೆ. ದಯವಿಟ್ಟು ವರದಿ ಬರುವವರೆಗೂ ತಪ್ಪು ಸಂದೇಶಗಳನ್ನು ಪ್ರಚಾರ ಮಾಡಿ, ಸಮಾಜ ಆರೋಗ್ಯ ಹಾಳು ಮಾಡಬೇಡಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version