Site icon Vistara News

Medical Shop: 18ಕ್ಕಿಂತ ಕೆಳ ವಯಸ್ಸಿನವರಿಗೆ ಮೆಡಿಕಲ್‌ ಶಾಪ್‌ನಲ್ಲಿ ಕಾಂಡೋಮ್‌ ಕೊಡುವಂತಿಲ್ಲ; ರಾಜ್ಯದಲ್ಲಿ ಡಿಸಿಗಳಿಂದ ಸುತ್ತೋಲೆ: ನಾಗಣ್ಣ ಗೌಡ

Chairman, State Commission for Protection of Child Rights Naganna Gowda

ಕಾರವಾರ: ಶಾಲಾ ಮಕ್ಕಳಿಗೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೆಡಿಕಲ್ ಶಾಪ್‌ನಲ್ಲಿ (Medical Shop) ಕಾಂಡೋಮ್‌ ಕೊಡುವಂತಿಲ್ಲ ಹಾಗೂ ವೈನ್ ಶಾಪ್‌ನಲ್ಲಿ ತಂಬಾಕು ಉತ್ಪನ್ನಗಳ ಸಹಿತ ಮಾದಕ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ವಯಸ್ಕರು ಬಳಸುವ ವಸ್ತುಗಳು ಪತ್ತೆಯಾಗಿದ್ದವು. ಈ ಘಟನೆಯ ಬಳಿಕ ಸಮಾಜ, ಮಕ್ಕಳನ್ನು ನಿಯಂತ್ರಿಸುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಇದು ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ. ಆದರೆ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಇಂಥ ಅನಗತ್ಯ ವಸ್ತುಗಳನ್ನು ನೀಡಬಾರದು ಎಂಬುದು ಕಾನೂನಿನಲ್ಲೇ ಇದೆ. ಈ ನಿಟ್ಟಿನಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ | Rahul And Athiya | ದೀಪಗಳಿಂದ ಅಲಂಕರಿಸಿದ ಕೆ.ಎಲ್‌ ರಾಹುಲ್ ನಿವಾಸ: ಮದುವೆ ತಯಾರಿ ಬಲು ಜೋರು?

ಉತ್ತರ ಕನ್ನಡದಲ್ಲಿ ಬುಡಕಟ್ಟು ಸಮುದಾಯಗಳಿರುವುದರಿಂದ ಇಲ್ಲಿ ಬಾಲ್ಯ ವಿವಾಹ ಪ್ರಕರಣಗಳಿವೆ. ಆದರೆ ಇದು ಚೈಲ್ಡ್ ಮ್ಯಾರೇಜ್ ಅಲ್ಲ, ಜೈಲ್ ಮ್ಯಾರೇಜ್. ಮಕ್ಕಳಲ್ಲಿ ಜಾಗೃತಿ ಇಲ್ಲದಿರುವುದರಿಂದ ಇಂಥ ಘಟನೆಗಳಾಗುತ್ತಿದ್ದು, ಹಳ್ಳಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದೆ. ಯಾರಿಗಾದರೂ ಜೈಲಿಗೆ ಹಾಕಿಸಬೇಕೆಂದರೆ 18 ವರ್ಷದೊಳಗಿನವರಿಗೆ ಮದುವೆ ಮಾಡಿಸಬೇಕು ಎಂದರು.

ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲು ಗ್ರಾಮ ಮಟ್ಟದ ಮಕ್ಕಳ ಸಂರಕ್ಷಣಾ ಸಮಿತಿ, ಗ್ರಾಮ ಪಂಚಾಯಿತಿ ಮಟ್ಟದ ಸಮಿತಿ ಬಲಗೊಳಿಸಲು ತೀರ್ಮಾನಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಸ್ವಸಹಾಯ ಸಂಘದವರ ಸಹಯೋಗದಲ್ಲಿ ಈ ಸಮಿತಿಯನ್ನು ರಚಿಸಲಾಗುತ್ತಿದೆ. ಇದನ್ನು ಮೇಲುಸ್ತಾವರಿ ಮಾಡಲು ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಇರಲಿದೆ ಎಂದರು.

ರಾಜ್ಯದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 195 ಸುಮೋಟೊ ಪ್ರಕರಣ ದಾಖಲಾಗಿದೆ. ಸರಾಸರಿ ಪ್ರತಿ ಜಿಲ್ಲೆಯಲ್ಲಿ 50 ರಿಂದ 100 ಪ್ರಕರಣಗಳಿವೆ. ಆದರೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ, ಉತ್ತರ ಕನ್ನಡದಲ್ಲಿ ಕಡಿಮೆ ಇದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ ಹಾಗೂ ಬುಡಕಟ್ಟು ಜನಾಂಗಗಳಿರುವಲ್ಲಿ ಹೆಚ್ಚಿವೆ. ಜಿಲ್ಲೆಯಲ್ಲಿ ಇಂಥ 26 ಮದುವೆಗಳನ್ನು ತಡೆಯಲಾಗಿದ್ದು, ಹಳಿಯಾಳದಲ್ಲಿ 19 ಬಾಲ್ಯ ವಿವಾಹವನ್ು ತಡೆಯಲಾಗಿದೆ ಎಂದರು.

ಇದನ್ನೂ ಓದಿ | ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲೂ Jio True 5G ಸೇವೆ ಶುರು

ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನವರ ಮೇಲೆ 45 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 26 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಈವರೆಗೆ ನನಗೆ ಸಿಕ್ಕ ಮಾಹಿತಿಯಂತೆ ರಾಜ್ಯದಲ್ಲಿ 2400ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಸಿನವರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಇದರ ಪ್ರಮಾಣ ಹೆಚ್ಚಿದ್ದು, ನಿರಂತರವಾಗಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.

ಮಕ್ಕಳ ಸಹಾಯವಾಣಿ 1098 ಈವರೆಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ, ರಾಷ್ಟ್ರಮಟ್ಟದಲ್ಲಿ ನಿಯಮಾವಳಿ ರಚನೆಯಾಗುತ್ತಿದ್ದು, 112 ಸಂಖ್ಯೆಯ ಜತೆಗೆ ಈ ಸಹಾಯವಾಣಿಯನ್ನು ಸಂಯೋಜಿಸಲು ಚರ್ಚೆ ನಡೆದಿದೆ. ಅದಕ್ಕೆ ಹಿರಿಯ ನಾಗರಿಕರು, ಸಮಾಜ ಸೇವಕರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ ನಂತರ ಇದು ಚಾಲ್ತಿಗೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ | Mild Earthquake : ಸೇಡಂ ತಾಲೂಕಿನ ಕೆಲವು ಕಡೆ ಲಘು ಭೂಕಂಪನ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

Exit mobile version