ಉಡುಪಿ: ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರು ‘ಉಡುಪಿಯಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಹೆಚ್ಚಿಸುವ’ ಭರವಸೆ ಕೊಟ್ಟಿದ್ದಾರೆ. ಕಾಂಗ್ರೆಸ್ನ ಐದು ಗ್ಯಾರಂಟಿ (Congress Guarantee)ಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಇಂದು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಶಕ್ತಿ ಯೋಜನೆಗೆ ಚಾಲನೆ ಕೊಟ್ಟರು. ಅದೇ ವೇಳೆ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರೂ ಕೂಡ ತಮ್ಮ ಜಿಲ್ಲೆಗಳಲ್ಲಿ ’ಶಕ್ತಿ’ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಅದರಂತೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಕೊಟ್ಟು, ಉಚಿತ ಪಾಸ್ ವಿತರಿಸಿ ಬಳಿಕ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಅವರೊಂದಿಗೆ ಅನೇಕ ಮಹಿಳೆಯರು ಇದ್ದರು. ನೂಕುನುಗ್ಗಲು ಕೂಡ ಉಂಟಾಗಿತ್ತು.
ಹೀಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ‘ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಎಷ್ಟಿದೆ ಎಂದು ಮಾಹಿತಿ ಪಡೆದಿದ್ದೇನೆ. ಕೇವಲ 95 ಬಸ್ಗಳು ಮಾತ್ರ ಇವೆ. ಈ ಭಾಗದಲ್ಲಿ ಖಾಸಗಿ ಬಸ್ಗಳೇ ಜಾಸ್ತಿ. ಹೀಗಾಗಿ ಉಡುಪಿ ಮಹಿಳೆಯರು ಸರ್ಕಾರದ ಯೋಜನೆಯಿಂದ ವಂಚಿತರಾಗುತ್ತಾರೆ. ಉಡುಪಿ ಭಾಗದಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತಾಡುತ್ತೇನೆ. ಸಾರಿಗೆ ಸಚಿವರ ಗಮನಕ್ಕೂ ತರುತ್ತೇನೆ’ ಎಂದಿದ್ದಾರೆ. ‘ಉಡುಪಿಯಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಜಾಸ್ತಿ ಇದ್ದಾರೆ. ನಾನು ಇಲ್ಲಿನ ಉಸ್ತುವಾರಿ ಸಚಿವೆಯಾಗಿ ಶಕ್ತಿ ಯೋಜನೆಯ ಲಾಭ ಇಲ್ಲಿನ ಮಹಿಳೆಯರಿಗೆ ಸಿಗುವಂತೆ ಮಾಡುತ್ತೇನೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗಬೇಕು’ ಎಂದು ಹೇಳಿದರು.
ಗೃಹಲಕ್ಷ್ಮಿ ಬಗ್ಗೆ ಲಕ್ಷ್ಮಿ ಹೇಳಿದ್ದೇನು?
ಇದೇ ವೇಳೆ ಕಾಂಗ್ರೆಸ್ನ ಇನ್ನೊಂದು ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ ಅಂದರೆ ಮಹಿಳೆಯರ ಅಕೌಂಟ್ಗೆ 2000 ರೂಪಾಯಿ ಹಾಕುವ ಬಗ್ಗೆ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ‘ ಈ ಯೋಜನೆಯನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ನಮ್ಮ ಯೋಜನೆಯಲ್ಲಿ ಸಮಾಲೋಚನೆ ನಡೆಯುತ್ತಿದೆ. ನಾಳೆ ಸಂಜೆಯೊಳಗೆ ಒಂದು ನಿರ್ದಿಷ್ಟ ರೂಪುರೇಷೆ ನೀಡುತ್ತೇವೆ. ಶೀಘ್ರದಲ್ಲೇ ಗೆಜೆಟ್ ನೊಟಿಫಿಕೇಶನ್ ಮೂಲಕ ಸಮಗ್ರ ವಿಷಯ ತಿಳಿಯುತ್ತದೆ. ಆಗಸ್ಟ್ 15ರಂದು ಗೃಹಲಕ್ಷ್ಮಿ ಯೋಜನೆ ಪ್ರಾರಂಭಿಸುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ಡಿ ಕೆ ಶಿವಕುಮಾರ್; ಉಡುಪಿ ಶ್ರೀಕೃಷ್ಣನ ಪಾದಕ್ಕೆರಗಿದ ಲಕ್ಷ್ಮಿ ಹೆಬ್ಬಾಳ್ಕರ್
‘ಉಡುಪಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ. ನನ್ನ ಮೇಲೆ ಭರವಸೆ ಇಟ್ಟು ಉಡುಪಿಯ ಉಸ್ತುವಾರಿ ಕೊಟ್ಟಿದ್ದಾರೆ. ನನ್ನ ಗಮನವನ್ನು ಅಭಿವೃದ್ಧಿಯತ್ತ ಕೇಂದ್ರೀಕರಿಸುತ್ತೇನೆ. ವಿಪಕ್ಷಗಳ ಶಾಸಕರ ಸಹಕಾರವನ್ನೂ ಕೋರುತ್ತೇನೆ. ಇನ್ನು ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಇಲ್ಲಿನ ಜನರು ಬಹಳ ಮೃದು ಸ್ವಭಾವದವರು ಹಾಗೂ ಸುಸಂಸ್ಕೃತರು. ಎಲ್ಲರನ್ನೂ ಒಟ್ಟಾಗಿಸಿಕೊಂಡು ಪ್ರಗತಿ ಕೆಲಸ ಮಾಡುತ್ತೇನೆ. ತಿಂಗಳಿಗೆ ಎರಡು ಬಾರಿಯಾದರೂ ಈ ಜಿಲ್ಲೆಗೆ ಬರಬೇಕು ಎಂದು ನಿರ್ಧರಿಸಿದ್ದೇನೆ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.