ಬೆಂಗಳೂರು: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ‘ಶಕ್ತಿ’ಗೆ (Free Bus Travel) ಇನ್ನೇನು ಕೆಲವೇ ಹೊತ್ತಲ್ಲಿ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM siddaramaiah) ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದು, ಬಳಿಕ ಮಹಿಳೆಯರಿಗೆ ಉಚಿತ ಟಿಕೆಟ್ ಹಂಚಲಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಇತರ ಪ್ರಮುಖರೆಲ್ಲ ಉಪಸ್ಥಿತರಿರುವರು. ಸಿಎಂ ಸಿದ್ದರಾಮಯ್ಯನವರಿಂದ ಅಧಿಕೃತ ಚಾಲನೆ ಸಿಗುತ್ತಿದ್ದಂತೆ ಮಹಿಳೆಯರಿಗೂ ಸರ್ಕಾರಿ ಬಸ್ನಲ್ಲಿ ಪ್ರಯಾಣ ಉಚಿತವಾಗಲಿದೆ.
ಈ ಶಕ್ತಿ ಯೋಜನೆ ಉದ್ಘಾಟನೆ ನಿಮಿತ್ತ ಇಂದು ಬೆಂಗಳೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಉಚಿತ ಪ್ರಯಾಣದ ಯೋಜನೆ ಉದ್ಘಾಟನೆಯಾಗುತ್ತಿದ್ದಂತೆ ಇಂದು ಪ್ರತಿ ಬಿಎಂಟಿಸಿ ಬಸ್ಗಳಲ್ಲೂ ಪೊಲೀಸರು ಕೂಡ ಪ್ರಯಾಣ ಮಾಡಲಿದ್ದಾರೆ. ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ಗೊಂದಲ-ಜಗಳ-ಸಂಘರ್ಷ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಂದರೆ ಪ್ರತಿ ಬಿಎಂಟಿಸಿ ಬಸ್ನಲ್ಲಿ ಚಾಲಕ, ನಿರ್ವಾಹಕನ ಜತೆ ಒಬ್ಬರು ಪೊಲೀಸ್ ಕೂಡ ಇರಲಿದ್ದಾರೆ. ಒಟ್ಟಾರೆ ಶಕ್ತಿ ಯೋಜನೆ ಉದ್ಘಾಟನೆಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಾದ ಸಿದ್ಧತೆ ಮಾಡಿಕೊಳ್ಳುವಂತೆ ಪೊಲೀಸ್ ಆಯುಕ್ತರು ನಗರದ ಎಂಟೂ ವಿಭಾಗಗಳ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:Free Bus Service: ಕಾಂಗ್ರೆಸ್ಗೆ ದುರಹಂಕಾರ; ಶೋಭನಿಗೂ ಫ್ರೀ ಎಂದಿದ್ದಕ್ಕೆ ಸಂಸದೆ ಫುಲ್ ಗರಂ
ಇಂದು ಯೋಜನೆಯ ಮೊದಲ ದಿನವಾಗಿದ್ದರಿಂದ ಸಣ್ಣಪುಟ್ಟ ಗೊಂದಲಗಳು ಆಗಬಹುದು. ನಿರ್ವಾಹಕ ಮತ್ತು ಮಹಿಳೆಯರ ಮಧ್ಯೆ ಮಾತಿನ ಚಕಮಕಿ ಆಗಬಹುದು. ಇದೇ ದೊಡ್ಡದಾಗಿ ಸಂಘರ್ಷ ಹೆಚ್ಚದಂತೆ ತಡೆಯುವ ಸಲುವಾಗಿಯೇ ಪೊಲೀಸರು, ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಎಂಟು ವಿಭಾಗಗಳಿಂದ ಒಟ್ಟು 2 ಸಾವಿರ ಹೋಂ ಗಾರ್ಡ್ಸ್ ಮತ್ತು ಆಯಾ ಏರಿಯಾದ ಪೊಲೀಸರನ್ನು ನಿಯೋಜಿಸಲಾಗಿದೆ. ಬಿಎಂಟಿಸಿ ಬಸ್ಗಳು ಸಂಚರಿಸುವ ಪ್ರಮುಖ ಮಾರ್ಗಗಳಲ್ಲಿ ಹೊಯ್ಸಳ ಪೊಲೀಸರು ಕೂಡ ನಿರಂತರವಾಗಿ ಗಸ್ತು ತಿರುಗುತ್ತಿರುತ್ತಾರೆ. ಪೊಲೀಸ್ ಬಿಗಿ ಬಂದೋಬಸ್ತ್ ಮಧ್ಯೆಯೇ ಇಂದು ಬಿಎಂಟಿಸಿ ಬಸ್ಗಳು ಸಂಚಾರ ಮಾಡಲಿವೆ.