ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿ (Congress Guarantee)ಗಳಲ್ಲಿ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆ ಇಂದಿನಿಂದ ರಾಜ್ಯದಲ್ಲಿ ಜಾರಿಯಾಗುತ್ತಿದೆ. ಅಂದರೆ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಇಂದು ಬೆಳಗ್ಗೆ 11ಗಂಟೆ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah)ನವರು ’ಶಕ್ತಿ’ಗೆ ಚಾಲನೆ ನೀಡಲಿದ್ದು ತನ್ನಿಮಿತ್ತ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಿದ್ಧತೆ ನಡೆದಿದೆ. ಇಡೀ ಬಸ್ ನಿಲ್ದಾಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಹೊಸದೊಂದು ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಂದು ಟಿಕೆಟ್ ಹಂಚಲಿದ್ದಾರೆ ಸಿಎಂ!
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸೌಧದಿಂದ ಮೆಜೆಸ್ಟಿಕ್ವರೆಗೆ ಬಸ್ನಲ್ಲಿ ಪ್ರಯಾಣ ಮಾಡಿ, ಅಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಾಂಕೇತಿಕವಾಗಿ ಟಿಕೆಟ್ ಕೂಡ ಹಂಚಲಿದ್ದಾರೆ. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿರುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಜ್ಜಯಿನಿ ಪ್ರವಾಸಕ್ಕೆ ತೆರಳಿದ್ದು, ಕಾರ್ಯಕ್ರಮದ ವೇಳೆಗೆ ಆಗಮಿಸಲಿದ್ದಾರೆ. ನಾಲ್ಕೂ ನಿಗಮಗಳಲ್ಲಿ ಒಟ್ಟಿಗೇ ಶಕ್ತಿ ಯೋಜನೆ ಉದ್ಘಾಟಿಸುವ ಅವರು ಮಧ್ಯಾಹ್ನ 12.30ಕ್ಕೆ ಉಚಿತವಾಗಿ ಟಿಕೆಟ್ ಹಂಚಲಿದ್ದಾರೆ. ಮಧ್ಯಾಹ್ನ 1ಗಂಟೆಯಿಂದ ರಾಜ್ಯಾದ್ಯಂತ ಶಕ್ತಿ ಅಧಿಕೃತವಾಗುತ್ತದೆ. ಮಹಿಳೆಯರು ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಇನ್ನು ಚಿಕ್ಕಮಗಳೂರಲ್ಲಿ ಮಧ್ಯಾಹ್ನ 12ಗಂಟೆಗೆ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಅವರು, ಹಾಸನದಲ್ಲಿ ಅಲ್ಲಿನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಮೈಸೂರಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮಹಿಳೆಯರ ಉಚಿತ ಬಸ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಇಂದು ಅಲ್ಲಿನ ಉಸ್ತುವಾರಿ ಸಚಿವರು ಶಕ್ತಿ ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ: Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?
ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್ ಕಾರ್ಡ್ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ.