Site icon Vistara News

ಮಹಿಳೆಯರ ಉಚಿತ ಬಸ್​ ಪ್ರಯಾಣಕ್ಕೆ ಪಿಂಕ್​ ಚೀಟಿ​ ರೆಡಿ; ಇಟಿಎಂನಲ್ಲಿ ಟಿಕೆಟ್​ ಪಡೆಯೋದು ಹೇಗೆ?

Women Shakti Ticket

#image_title

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣ (Free Bus Travel). ಒಂದು ರೂಪಾಯಿ ಖರ್ಚಿಲ್ಲದೆ ಸಂಚಾರ ಮಾಡಬಹುದಾಗಿದೆ. ಕಾಂಗ್ರೆಸ್​ನ ಐದು ಗ್ಯಾರಂಟಿ (Congress Guarantee)ಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಲಿದ್ದಾರೆ. ಈ ಶಕ್ತಿ ಯೋಜನೆ ಫಲಾನುಭವಿಗಳಾದ ಮಹಿಳೆಯರಂತೂ ಫುಲ್ ಖುಷಿಯಾಗಿದ್ದಾರೆ. ಹಾಗೇ, ಪ್ರತಿದಿನ ಮಹಿಳೆಯರ ಉಚಿತ ಪ್ರಯಾಣಕ್ಕೆ ಹೇಗೆ ಟಿಕೆಟ್​ ನೀಡಲಾಗುತ್ತದೆ ಎಂಬ ಕುತೂಹಲ, ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಸಾಮಾನ್ಯವಾಗಿ ಬಸ್​​ಗಳಲ್ಲೆಲ್ಲ ಈಗ ಎಲೆಕ್ಟ್ರಾನಿಕ್​ ಟಿಕೆಟ್​ ಯಂತ್ರ (ETM-ಇಟಿಎಂ)ದಿಂದಲೇ ಟಿಕೆಟ್​ ನೀಡಲಾಗುತ್ತದೆ. ಇಲ್ಲಿ ನಿರ್ವಾಹಕ ಕೈಯಿಂದ ಬರೆದು ಕೊಡುವ ಪ್ರಮೇಯ ಇರುವುದಿಲ್ಲ. ಈ ವಿದ್ಯುಚ್ಚಾಲಿತ ಟಿಕೆಟ್​ ಯಂತ್ರದಿಂದಲೇ ಈಗ ಮಹಿಳೆಯರ ಉಚಿತ ಪ್ರಯಾಣಕ್ಕೂ ಟಿಕೆಟ್​ ನೀಡಲಾಗುತ್ತದೆ. ಇಟಿಎಂಗಳಲ್ಲಿ ಈಗಾಗಲೇ Women Ticket ಎಂಬ ಆಯ್ಕೆ ಬಂದಿದೆ. ನಿರ್ವಾಹಕರು ಇನ್ನು ಮುಂದೆ ಮಹಿಳೆಯರಿಗೆ ಟಿಕೆಟ್​ ಕೊಡುವಾಗ ಆ Women Ticket ಆಯ್ಕೆಯನ್ನು ಒತ್ತಿ, ಉಳಿದಂತೆ ಅವರು ಹೋಗಬೇಕಾದ ಊರಿನ ಹೆಸರನ್ನು ಸೆಲೆಕ್ಟ್​ ಮಾಡಿ, ಕೊನೆಯಲ್ಲಿ Enter ಬಟನ್​ ಒತ್ತಿದಾಗ ಟಿಕೆಟ್​ ಹೊರಬರುತ್ತದೆ. ಆ ಟಿಕೆಟ್​ ಮೇಲೆ ಮಹಿಳೆಯರ ಉಚಿತ ಚೀಟಿ ಎಂದೇ ಬರೆದುಕೊಂಡಿರುತ್ತದೆ. ಅಷ್ಟೇ ಅಲ್ಲ, ಮೊತ್ತದ ಎದುರು ನಿಮಗೆ ಶೂನ್ಯ ಎಂದು ನಮೂದಾಗಿರುತ್ತದೆ.

ಇಟಿಎಂ ಕೆಟ್ಟರೆ ಏನು ಮಾಡ್ಬೇಕು?
ಈಗ ಎಲೆಕ್ಟ್ರಾನಿಕ್​ ಟಿಕೆಟ್​ ಯಂತ್ರಗಳು ಚಾಲ್ತಿಯಲ್ಲಿ ಬಂದಿದ್ದರೂ ಕೂಡ ಕೆಲವೊಮ್ಮೆ ಅವು ಕೆಟ್ಟು ಹೋದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲವು ಬಸ್​ಗಳಲ್ಲಿ ನಿರ್ವಾಹಕರು ಟಿಕೆಟ್​​ನ್ನು ಕೈಯಲ್ಲಿ ಬರೆದು ಕೊಡುವುದನ್ನು ನೋಡಿದ್ದೀರಿ. ಇನ್ನು ಶಕ್ತಿ ಯೋಜನೆಗಾಗಿಯೂ ಅಂಥ ಮ್ಯಾನ್ಯುವಲ್​ ಟಿಕೆಟ್​​ಗಳನ್ನು ಸಿದ್ಧಪಡಿಸಲಾಗಿದೆ. ಇದನ್ನು ಗುಲಾಬಿ ಬಣ್ಣದಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಅದರ ಮೇಲೆ ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್​ ಎಂದು ಬರೆಯಲಾಗಿದ್ದು, ಪ್ರಯಾಣದ ಸ್ಥಳ ಎಲ್ಲಿಂದ..ಎಲ್ಲಿಗೆ ಎಂದು ನಮೂದಿಸಲಾಗಿದೆ. ಅದನ್ನು ತುಂಬಲು ಜಾಗ ಬಿಡಲಾಗಿದೆ. ಅಂದರೆ ನಿರ್ವಾಹಕರು ಪ್ರಯಾಣಿಕಳ ಬಳಿ ಕೇಳಿ, ಸ್ಥಳವನ್ನು ನಮೂದಿಸಿ ಟಿಕೆಟ್ ಕೊಡಬೇಕು. ಅದರ ಮೇಲೆ ಕೂಡ ಶೂನ್ಯ ಮೊತ್ತ ಎಂದು ಬರೆಯಲಾಗಿದೆ.

ಈ ಪಿಂಕ್​ ಟಿಕೆಟ್​​ ಕೆಎಸ್​ಆರ್​ಟಿಸಿ ಬಸ್​​ಗಳಲ್ಲಿ ಕೊಡಲಾಗುತ್ತದೆ. ಇನ್ನು ಬಿಎಂಟಿಸಿ ಬಸ್​ಗಳಲ್ಲಿ ಬಿಳಿ ಬಣ್ಣದ ಟಿಕೆಟ್ ಮೇಲೆ ಉಚಿತ ಪ್ರಯಾಣ ಎಂದು ಸೀಲ್ ಹಾಕಿ ಕೊಡಲಾಗುತ್ತದೆ. ಇಂದು ಶಕ್ತಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ, ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣ ಮಾಡಲಿರುವ ಮಹಿಳೆಯರಿಗೆ ಇದೇ ಪಿಂಕ್​ ಬಣ್ಣದ ಮತ್ತು ಬಿಎಂಟಿಸಿ ಬಸ್​ ಹತ್ತುವ ಮಹಿಳೆಯರಿಗೆ ಬಿಳಿ ಬಣ್ಣದ ಟಿಕೆಟ್ ವಿತರಿಸಲಾಗುತ್ತದೆ.

Exit mobile version