Site icon Vistara News

Opposition Meet: ಪ್ರಧಾನ ಮಂತ್ರಿ ಹುದ್ದೆ ಕಾಂಗ್ರೆಸ್​ಗೆ ಬೇಡ; ಪ್ರತಿಪಕ್ಷಗಳ ಸಭೆಯಲ್ಲಿ ಖರ್ಗೆ ಸ್ಪಷ್ಟ ನಿಲುವು

Mamata Banerjee Sonia Gandhi And Mallikarjun Kharge

2024ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha Election) ಬಿಜೆಪಿ ವಿರುದ್ಧ ಹೋರಾಡಲು ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿವೆ. ಕಾಂಗ್ರೆಸ್​ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ 26 ಪಕ್ಷಗಳ ನಾಯಕರ ಮಹತ್ವದ ಸಭೆ (Opposition Meet) ಕೂಡ ನಡೆಯುತ್ತಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ‘ಪ್ರಧಾನ ಮಂತ್ರಿ ಹುದ್ದೆಯಲ್ಲಿ ಕಾಂಗ್ರೆಸ್​ಗೆ ಆಸಕ್ತಿಯಿಲ್ಲ. ದೇಶದ ಉನ್ನತ ಹುದ್ದೆಯನ್ನು ನಾವೇ ಪಡೆಯಬೇಕು ಎಂಬ ಆಶಯದಿಂದ ನಾವು ಈ ಸಭೆ ಆಯೋಜಿಸುತ್ತಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ನಾವು ಒಂದಾಗಿದ್ದೇವೆ’ ಎಂದು ಹೇಳಿದ್ದಾರೆ. ಅಂದರೆ ಪ್ರತಿಪಕ್ಷದ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಲು ಕಾಂಗ್ರೆಸ್​​ನಿಂದ ಯಾರೂ ಮುಂದೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.

‘ನಾನು ಈ ಹಿಂದೆ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಬರ್ತ್ ಡೇ ಸಂದರ್ಭದಲ್ಲಿ ಚೆನ್ನೈನಲ್ಲೂ ಇದೇ ವಿಷಯ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ ಪ್ರಧಾನ ಮಂತ್ರಿ ಹುದ್ದೆ ಪಡೆಯಲು ಕಾಂಗ್ರೆಸ್​ಗೆ ಆಸಕ್ತಿಯಿಲ್ಲ. ನಾವೀಗ 26 ಪಕ್ಷಗಳು ಒಟ್ಟಾಗಿದ್ದೇವೆ. ಎಲ್ಲ ಸೇರಿ 11 ರಾಜ್ಯಗಳಲ್ಲಿ ನಮ್ಮ ಒಕ್ಕೂಟದ ಪಕ್ಷಗಳದ್ದೇ ಸರ್ಕಾರ ಇದೆ. ಬಿಜೆಪಿ ಖಂಡಿತವಾಗಿಯೂ 2024ರ ಲೋಕಸಭೆ ಚುನಾವಣೆಯಲ್ಲಿ ಸ್ವಂತಬಲದಲ್ಲಿ 303 ಸೀಟುಗಳನ್ನು ಗೆಲಲು ಸಾಧ್ಯವೇ ಇಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: Opposition Meet : ವಿಪಕ್ಷಗಳ ರಣತಂತ್ರ ಸಭೆ ಆರಂಭ; ಇಂದೇ ಬದಲಾಗುತ್ತಾ UPA ಹೆಸರು, ಕ್ಯಾಪ್ಟನ್‌ ಯಾರು?

‘ರಾಜ್ಯಮಟ್ಟದಲ್ಲಿ ನಮ್ಮ ಒಕ್ಕೂಟದ ಕೆಲವು ಪಕ್ಷಗಳ ಮಧ್ಯೆ ಭಿನ್ನ ಅಭಿಪ್ರಾಯಗಳು ಇದ್ದೇ ಇವೆ. ಆದರೆ ಇದು ಖಂಡಿತ ಸೈದ್ಧಾಂತಿಕ ಭಿನ್ನಮತವಲ್ಲ. ನಾವು ಈ ದೇಶದ ಜನರ, ಇಲ್ಲಿನ ಮಧ್ಯಮ ವರ್ಗದ ಜನರು, ಯುವಕರು, ಬಡವರು, ದಲಿತು, ಹಿಂದುಳಿದ ವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗೆ ಇಡುತ್ತಿದ್ದೇವೆ. ಇವರೆಲ್ಲರ ಹಕ್ಕುಗಳನ್ನು ಈಗಿನ ಸರ್ಕಾರ ತೆರೆಮರೆಯಲ್ಲಿಯೇ ಹಿಸುಕಿ ಹಾಕುತ್ತಿದೆ’ ಎಂದೂ ಖರ್ಗೆ ಹೇಳಿದ್ದಾರೆ.

Exit mobile version