Site icon Vistara News

Voter data | ಗದಗದಲ್ಲೂ ಮತದಾರರ ಹೆಸರು ಡಿಲಿಟ್?‌ ಬೂತ್‌ ಮಟ್ಟದಿಂದಲೇ ಸಮೀಕ್ಷೆ ಆರಂಭಿಸಿದ ಕಾಂಗ್ರೆಸ್‌

HK Patil

ಗದಗ: ಗದಗ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿರುವ ಶಂಭು‌ ಕಾಳೆ ಅವರ ಹೆಸರನ್ನೇ ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡಿವುದು ಬಯಲಾಗಿದೆ. ಇದರೊಂದಿಗೆ ಬೆಂಗಳೂರಿನ ಚಿಲುಮೆ ಮಾದರಿ ಕಾರ್ಯಾಚರಣೆ ಗದಗದಲ್ಲೂ ನಡೆದಿದೆಯೇ ಎಂಬ ಸಂಶಯ ಮೂಡಿಸಿದೆ. ಶಂಭು ಕಾಳೆ ಅವರ ಹೆಸರನ್ನೇ ಕಿತ್ತು ಹಾಕಿರುವುದರಿಂದ ಬೇರೆ ಕಡೆಯೂ ಇದೇ ರೀತಿ ಆಗಿರಬಹುದು ಎಂದು ಹೇಳಿರುವ ಕಾಂಗ್ರೆಸ್‌ ಬೂತ್‌ ಮಟ್ಟದಿಂದಲೇ ಸಮೀಕ್ಷೆ ನಡೆಸಲು ಮುಂದಾಗಿದೆ.

ಮಾಜಿ ಸಚಿವ, ಗದಗ ಶಾಸಕ ಎಚ್.ಕೆ.ಪಾಟೀಲ ಅವರು ಇದೇ ಸಂಶಯವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನ ಮತಗಳನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು, ಹೋರಾಟ ನಡೆಸಲಾಗುವುದು ಎಂದಿದ್ದಾರೆ.

ಈ ಬಾರಿ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್‌ ಮಾಡಲಾಗಿರುವುದರಿಂದ ಕಾಂಗ್ರೆಸ್‌ಗೆ ಗೆಲುವು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿರುವುದಕ್ಕೂ ಎಚ್‌.ಕೆ. ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ʻʻಯಾರೋ ಮೂರ್ಖತನದಿಂದ ಮಾತನಾಡ್ತಿದಾರೆ. ಅವರಿಗೇನು ಹೇಳೊಕಾಗೋದಿಲ್ಲ. ಡಬಲ್‌ ವೋಟಿಂಗ್ ಇದ್ರೆ, ಅಥವಾ ಡಬಲ್ ಕಡೆ ಇದ್ರೆ ಡಿಲಿಷನ್ ಮಾಡೋದಕ್ಕೆ ಪ್ರಕ್ರಿಯೆ ಇದೆ. ಆದರೆ ನಮ್ಮ ಕಾಂಗ್ರೆಸ್ ವೋಟುಗಳನ್ನು ಯಾರೂ ಕಡಿಮೆ ಮಾಡಬಾರದಷ್ಟೇ. ನಮ್ಮ ವೋಟರ್‌ಗಳ ರಕ್ಷಣೆ ಮಾಡುತ್ತೇವೆʼʼ ಅಂದಿದ್ದಾರೆ ಎಚ್‌.ಕೆ. ಪಾಟೀಲ್‌.

ʻʻಗದಗ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾಗಿರುವ ಶಂಭು ಕಾಳೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದಿದ್ದಾರೆ. ಯಾವ ಕಾರಣಕ್ಕೆ ತೆಗೆದಿದ್ದಾರೆ ಅನ್ನೋದನ್ನು ಪರಿಶೀಲಿಸುತ್ತಿದ್ದೇವೆ. ಒಂದಂತೂ ಸತ್ಯ, ಬೆಂಗಳೂರಿನಲ್ಲಿ ವೋಟರ್ ಐಡಿ ಗೋಲ್ಮಾಲ್ ಪ್ರಯತ್ನ ಮಾಡಿದ್ದಾರೆʼʼ ಎಂದು ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ʻʻಮತದಾರರ ಹೆಸರು ಡಿಲಿಟ್ ಕುರಿತು ಅಧ್ಯಯನ‌ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಈ ರೀತಿ ನಡೆದಿದೆಯೋ ಇಲ್ಲವೋ ಎಂದು ಹೇಳುವುದಕ್ಕೆ ಸದ್ಯಕ್ಕೆ ನಮ್ಮ ಬಳಿ ಯಾವುದೇ ಆಧಾರ‌ ಇಲ್ಲʼʼ ಎಂದಿರುವ ಹೆಚ್.ಕೆ. ಪಾಟೀಲ್‌ ಅವರು ಸ್ವತಃ ತಮ್ಮ ತಂಡದೊಂದಿಗೆ ಬೂತ್ ಮಟ್ಟದಿಂದ ಮತದಾರರ‌‌ ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ | Voter data | ವೋಟರ್‌ ಐಡಿ ಮಾತ್ರವಲ್ಲ ನಾಗರಿಕರ ಖಾಸಗಿ ಮಾಹಿತಿ ಲೂಟಿ ಆಗ್ತಿದೆ ಎಂದ ಪ್ರಿಯಾಂಕ್‌ ಖರ್ಗೆ

Exit mobile version