Site icon Vistara News

Rakshit Shetty: ಕಾಂಗ್ರೆಸ್‌ ನಾಯಕ ಮಿಥುನ್‌ ರೈ ವಿರುದ್ಧ ರಕ್ಷಿತ್‌ ಶೆಟ್ಟಿ ಗರಂ: ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ ನಟ

Congress leader Mithun Rai vs Rakshit Shetty

ಬೆಂಗಳೂರು: ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು (Krishna mutt politics) ನೀಡಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ಮಿಥುನ್‌ ರೈ ನೀಡಿದ್ದರು. ಈ ವಿಚಾರ ತಪ್ಪು ಎಂದಾದರೆ ಕ್ಷಮೆ ಯಾಚಿಸಲು ಸಿದ್ಧ ಎಂತಲೂ ಹೇಳಿಕೊಂಡಿದ್ದರು. ಆದರೆ ಇದೀಗ ಅವರ ಹೇಳಿಕೆಯ ವಿರುದ್ಧ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty) ಟ್ವೀಟ್‌ ಮೂಲಕ ಅಭಿಪ್ರಾಯ ಹೊರಹಾಕಿದ್ದಾರೆ.

ರಕ್ಷಿತ್‌ ಶೆಟ್ಟಿ ಟ್ವೀಟ್‌ನಲ್ಲಿ ʻʻದೇವಾಲಯದ ಪಟ್ಟಣವೆಂದೇ ಖ್ಯಾತಿ ಪಡೆದ ಉಡುಪಿ, ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇದರ ಬಗ್ಗೆ ನಿಮಗೆ ತಿಳಿದಿಲ್ಲದಿರುವಾಗ ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವುದೇಕೆ ???ʼʼ ಎಂದು ಬರೆದುಕೊಂಡಿದ್ದಾರೆ. ಅಂದಾಜು 58 ಸಾವಿರ ಮಂದಿ ಈ ಟ್ವೀಟ್‌ ಅನ್ನು ನೋಡಿದ್ದಾರೆ. 244 ಮಂದಿ ರಿಟ್ವೀಟ್‌ ಮಾಡಿದ್ದರೆ, 31 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Krishna mutt politics : ನಾನು ಇತಿಹಾಸಕಾರನಲ್ಲ, ಪೇಜಾವರ ಶ್ರೀಗಳು ಹೇಳಿದ್ದನ್ನು ಹೇಳಿದ್ದೇನೆ, ತಪ್ಪಿದ್ದರೆ ಕ್ಷಮಿಸಿ ಎಂದ ಮಿಥುನ್‌ ರೈ

ಮಿಥುನ್‌ ರೈ ಹೇಳಿದ್ದೇನು?

ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್‌ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್‌ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ಮತ್ತೊಮ್ಮೆ ಮೂಡುಬಿದಿರೆಯಲ್ಲಿ ಮಾತನಾಡಿದ ಅವರು, ನಾನೇನೂ ಇತಿಹಾಸಕಾರನಲ್ಲ. ಪೂಜ್ಯರಾದ ಪೇಜಾವರ ಹಿರಿಯ ಶ್ರೀಗಳು ಹೇಳಿದ ವಿಚಾರವನ್ನು ಪತ್ರಿಕೆಯಲ್ಲಿ ಓದಿದ್ದೆ. ಅದನ್ನೇ ಹೇಳಿದ್ದೆನೆ ಎಂದಿದ್ದರು.

ʻʻನಾನು ಉಡುಪಿ ಮಠದ ಪೇಜಾವರ ಶ್ರೀಗಳು ಈ ಹಿಂದೆ ಹೇಳಿದ್ದನ್ನೆ ಪುನರುಚ್ಚರಿಸಿದ್ದೇನೆ. ಅವರು ಹೇಳಿದ ಮಾತನ್ನೇ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಅದನ್ನೇ ನಾನು ಉಲ್ಲೇಖಿಸಿದ್ದೇನೆ. ನಾನು ಯಾವುದೇ ತಪ್ಪು ಸಂದೇಶ ನೀಡಲು ಹೊರಟಿರಲಿಲ್ಲʼʼ ಎಂದಿರುವ ಅವರು, ತಪ್ಪಾಗಿದ್ದರೆ ನಾನು ಕ್ಷಮಾಪಣೆ ಬೇಕಾದರೂ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Krishna Mutt politics : ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರೇ? ಚರ್ಚೆಗೆ ಕಾರಣವಾದ ಡಿಕೆಶಿ ಆಪ್ತ ಮಿಥುನ್‌ ರೈ ಹೇಳಿಕೆ

ಈ ನಡುವೆ, ಮಿಥುನ್‌ ರೈ ಮಾತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಗೆ ಸ್ಪಷ್ಟನೆ ನೀಡಿರುವ ಪೇಜಾವರ ಮಠದ ಈಗಿನ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಪೇಜಾವರ ಹಿರಿಯ ಶ್ರೀಗಳಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ. ಆದರೆ, ಮಧ್ವಾಚಾರ್ಯರ ಕಾಲದಲ್ಲಿ ಆ ಘಟನೆ ನಡೆದಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ನದಿ ತೀರದಲ್ಲಿ. ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Exit mobile version