ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೂ ಬೆಂಗಳೂರಿನಲ್ಲಿ ಆಗ ಭಾರಿ ಸುದ್ದಿಯಲ್ಲಿದ್ದ ವೋಟರ್ ಐಡಿ ಹಗರಣಕ್ಕೂ ಸಂಬಂಧ ಕಲ್ಪಿಸಿ ನೀಡಿದ ಸ್ಫೋಟಕ ಹೇಳಿಕೆಯಿಂದ ಕಾಂಗ್ರೆಸ್ ಬಹುತೇಕ ಅಂತರ ಕಾಯ್ದುಕೊಂಡಿದೆ. ಯಾರೂ ಇದರ ಬಗ್ಗೆ ಹೇಳಿಕೆ ನೀಡಲು ಸಿದ್ಧರಿರಲಿಲ್ಲ. ಮಂಗಳೂರಿನ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಕೂಡಾ ಸಮರ್ಥನೆ ಮಾಡಿರಲಿಲ್ಲ. ಈ ವಿಚಾರದಲ್ಲಿ ಏಕಾಂಗಿಯಾದ ಡಿ.ಕೆ. ಶಿವಕುಮಾರ್ ಕೊನೆಗೆ ʻಯಾರೂ ನನ್ನ ಬೆಂಬಲಕ್ಕೆ ಬರಬೇಕಾಗಿಲ್ಲʼ ಎಂದು ಹೇಳಿ ಸಮಾಧಾನ ಮಾಡಿಕೊಂಡಿದ್ದರು. ಇದೀಗ ಅಂತಿಮವಾಗಿ ಒಬ್ಬ ಕಾಂಗ್ರೆಸ್ ನಾಯಕ ಈ ಸ್ಫೋಟಕ ಹೇಳಿಕೆಗೆ ಬೆಂಬಲ ಪ್ರಕಟಿಸಿದ್ದಾರೆ. ಅವರೇ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿರುವ ಪ್ರಿಯಾಂಕ್ ಖರ್ಗೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ʻಕೆಪಿಸಿಸಿ ಅಧ್ಯಕ್ಷರು ಹೇಳಿಕೆ ಕೊಟ್ಟಾಗ ನಾನೂ ಇದ್ದೆ. ಬಹಳ ತರಾತುರಿಯಲ್ಲಿ ತನಿಖೆ ಮಾಡದೆಯೇ ಹೇಗೆ ಘೋಷಣೆ ಮಾಡ್ತಾರೆ ಅಂತ ಅಧ್ಯಕ್ಷರು ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.
ʻʻಈ ರೀತಿಯ ಘಟನೆಗಳು ಬೆಳಕಿಗೆ ಬರೋದು ಯಾವಾಗ? ಬಿಜೆಪಿಯವರು ಯಾವುದೋ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಇಂಥವೆಲ್ಲ ಬೆಳಕಿಗೆ ಬರುತ್ತವೆ. ಇದನ್ನೆಲ್ಲ ನಾವು ಬಯಲಿಗೆ ಎಳೆಯುವುದು ಯಾವಾಗʼʼ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ʻʻಹೋಂ ಮಿನಿಸ್ಟರ್ ಅವರ ತಾಲೂಕಿನಲ್ಲಿಯೇ ಮೊಹಮ್ಮದ್ ಶಾರಿಕ್ ತರಬೇತಿ ತೆಗೆದುಕೊಂಡಿರುವುದಲ್ವಾ? ಹಾಗಿದ್ದರೆ ನಮ್ಮ ಗುಪ್ತಚರ ವಿಭಾಗ ಏನು ಮಾಡುತ್ತಿತ್ತು. ಈಗ ಬೆನ್ನು ತಟ್ಟಿಕೊಳ್ಳುತ್ತಿರುವ ಗೃಹ ಸಚಿವರು ಏನು ಹೇಳುತ್ತಾರೆ? ಇಂಟೆಲಿಜೆನ್ಸ್ ಫೈಲ್ಯೂರ್ ಬಗ್ಗೆ ಮಾತಾಡಲು ಇವರು ತಯಾರಿದ್ದಾರಾ?ʼʼ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಎಲ್ಲದಕ್ಕೂ ಕಾಂಗ್ರೆಸ್ ಕಾರಣವಾ?
ಪರೇಶ್ ಮೆಸ್ತಾ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ರಿಪೋರ್ಟ್ ಬಂದಿದೆ. ಮೇಸ್ತಾ ಸಾವು ಕೊಲೆಯಲ್ಲ ಎಂದು ಅದೇ ಹೇಳಿದೆ. ಅಷ್ಟೆಲ್ಲ ಸೌಂಡ್ ಮಾಡಿದವರು ಈಗ ಯಾಕೆ ಮಾತನಾಡುತ್ತಿಲ್ಲ? ಬೆಂಗಳೂರಿನ ಕೆಜಿ ಹಳ್ಳಿ, ಡಿಜಿ ಹಳ್ಳಿಯಲ್ಲಿ ಬೆಂಕಿ ಹೆಚ್ಚಿದ್ದು ಕೂಡ ಕಾಂಗ್ರೆಸ್ ಫೈಲ್ಯೂರಾ? ನಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗಲೂ ಕೂಡ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಿರಾ? ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದಾದರೆ ಯಾಕೆ ಇಂಟೆಲಿಜೆನ್ಸ್ ತಪ್ಪಿನ ಬಗ್ಗೆ ಮಾತಾಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ʻಗೃಹ ಸಚಿವರು ಅಸಮರ್ಥರು ಅಂತ ಅವರ ಶಾಸಕರೇ ಹೇಳಿದ್ದಾರೆ. ಇವರ ಶಾಸಕರೇ ಶಾಸಕರ ಭವನದಲ್ಲಿ ಲಂಚ ತಗೊಳ್ತಾರೆ ಅಂತ ಎಲ್ಲರೂ ಹೇಳ್ತಾರೆʼʼ ಎಂದು ಹೇಳಿದ ಪ್ರಿಯಾಂಕ್, ʻʻನಾವೂ ಜಾತಿ ಧರ್ಮದ ಆಧಾರದ ಮೇಲೆ, ಭಾವನೆಗಳ ಆಧಾರದ ಮೇಲೆ ಚುನಾವಣೆಗೆ ಹೋಗಲ್ಲʼʼ ಎಂದ ಬಿಜೆಪಿಯನ್ನು ಕುಟುಕಿದರು.
ಯಡಿಯೂರಪ್ಪ ಕಡೆಗಣನೆ
ʻʻಪಕ್ಷದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣನೆ ಮಾಡುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಬಿ ಎಸ್ ವೈ ಮುಕ್ತ ಬಿಜೆಪಿ ಮಾಡುವುದಕ್ಕೆ ಇವರೇ ಹೊರಟಿದ್ದಾರೆ. ಯಡಿಯೂರಪ್ಪ ಅವರನ್ನು ಈಗಾಗಲೇ ಬಿಜೆಪಿಯವರು ಬಿಟ್ಟುಬಿಟ್ಟಿದ್ದಾರೆ. ಯಾವ ಕಾರ್ಯಕ್ರಮಕ್ಕೂ ಕೂಡ ಯಡಿಯೂರಪ್ಪಗೆ ಆಹ್ವಾನ ಕೊಡ್ತಿಲ್ಲ. ಜೆಪಿ ನಡ್ಡಾ ಬರ್ತಾರೆ ಅಂತ ಅನಿವಾರ್ಯವಾಗಿ ಕೊಪ್ಪಳದ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೆ ಕರೆದಿದ್ದಾರೆʼʼ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ನಳಿನ್ ಕುಮಾರ್ ಕಟೀಲ್‌ಗೆ ಪಕ್ಷದ ಮೇಲೆ ಹಿಡಿತವೇ ಇಲ್ಲ ಎಂದರು.
ಇದನ್ನೂ ಓದಿ | DK Shivakumar | ಭಯೋತ್ಪಾದಕನನ್ನು ಬೆಂಬಲಿಸಲು ಹೋಗಿ ಏಕಾಂಗಿಯಾದ ಡಿ.ಕೆ. ಶಿವಕುಮಾರ್: ಬಿಜೆಪಿ ವ್ಯಂಗ್ಯ