Site icon Vistara News

Praveen Nettaru | ಕುಟುಂಬಸ್ಥರಿಗೆ ಕಾಂಗ್ರೆಸ್ ನಾಯಕರ ಸಾಂತ್ವನ; ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು

ಕಾಂಗ್ರೆಸ್‌

ಮಂಗಳೂರು: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಕಾರಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ ಸೇರಿ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಪ್ರವೀಣ್‌ ಹತ್ಯೆಗೆ ಕಾರಣ. ಹೀಗಾಗಿ ಪ್ರಕರಣವನ್ನು ಎನ್‌ಐಎಗೆ ನೀಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಹತ್ಯೆಗಳಾದರೆ ಬಿಜೆಪಿಗರು ಟೀಕೆ ಮಾಡುತ್ತಿದ್ದರು. ಆದರೆ ಪ್ರಕರಣ ನಡೆದು ಒಂದು ವಾರವಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Praveen Nettaru | ಸಿಎಂ ಮುಂದೆ ದುಃಖ ತೋಡಿಕೊಂಡ ಪ್ರವೀಣ್‌ ಕುಟುಂಬ; ಸರಕಾರದಿಂದ 25 ಲಕ್ಷ ರೂ. ಪರಿಹಾರ

ಇವರ ಪಕ್ಷದವರಿಗೇ ರಕ್ಷಣೆ ಕೊಟ್ಟಿಲ್ಲ ಎಂದರೆ ಬೇರೆಯವರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದ ಹರಿಪ್ರಸಾದ್‌, ಗೃಹ ಸಚಿವರ ಮನೆಗೆ ಎಬಿವಿಪಿ ಮುತ್ತಿಗೆ ವಿಚಾರದಲ್ಲಿ ಮೊಸಳೆ ಕಣ್ಣೀರು ಹಾಕಿದರೆ ಯಾರೂ ನಂಬುವುದಿಲ್ಲ. ಬಿಜೆಪಿ ಆಡಳಿತ ಬಂದ ಮೇಲೆ ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿ ಇಲ್ಲ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಬಾಲಿಶ ಹೇಳಿಕೆ ನೀಡಿದ್ದಾರೆ. ಅವರು ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಬೇಕು ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಎಲ್ಲರೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರೂ ದೊಡ್ಡವರು ಇಂತಹ ಘಟನೆಗಳಿಗೆ ಬಲಿಯಾಗುವುದಿಲ್ಲ, ಬಡವರ ಮಕ್ಕಳೇ ಸಾಯುತ್ತಾರೆ. ಇಂತಹ ದುಷ್ಕೃತ್ಯಗಳ ಆರೋಪಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರವೀಣ್‌ ನೆಟ್ಟಾರು ಮನೆಗೆ ಕಾಂಗ್ರೆಸ್‌ ನಾಯಕರು ಬಂದಾಗ ಪ್ರವೀಣ್ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಧಿಕ್ಕಾರ ಕೂಗಿದರು. ಘಟನೆ ನಡೆದ ದಿನದಿಂದ ಇಲ್ಲಿಯವರೆಗೆ ಎಲ್ಲಿ ಹೋಗಿದ್ದಿರಿ ನೀವು ಎಂದು ಕಿಡಿ ಕಾರಿದರು.

ಇದನ್ನೂ ಓದಿ | Praveen Nettaru | ಸೊಲ್ಯುಷನ್ ನಿಮ್ಮ ಕೈಲೇ ಇದೆ ಸರ್‌‌: ಸಿಎಂ ಮುಂದೆ ಪ್ರವೀಣ್‌ ಪತ್ನಿ ಬೇಸರದ ನುಡಿ

Exit mobile version