Site icon Vistara News

‘ನನಗೆ ಒಳ್ಳೇ ದಿನಗಳು ಬರುತ್ತವೆ’ಎಂದ ಲಕ್ಷ್ಮಣ್​ ಸವದಿ; ಸಿದ್ದರಾಮಯ್ಯ ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿಯಾ?

Congress MLA Laxman Savadi Tallk about Minister Post In Belagavi

#image_title

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಿಂದ ಈ ಸಲ ಬಿಜೆಪಿ ಟಿಕೆಟ್​ ನೀಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು, ವಿಧಾನಸಭಾ ಚುನಾವಣೆಗೂ ಪೂರ್ವ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್​ ಸವದಿ (Laxman Savadi), ಈ ಸಲ ಗೆದ್ದಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಆದರೆ ಅವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಈ ವಿಷಯದಲ್ಲಿ ತುಸು ನಿರಾಸೆಗೊಂಡಿರುವ ಲಕ್ಷ್ಮಣ್​ ಸವದಿ (Congress MLA Laxman Savadi) ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಬಳಿಕ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿ ‘ಒಳ್ಳೆಯ ದಿನಗಳು ಬರುತ್ತವೆ. ನನಗೆ ನಿರಾಸೆಯಾಗಿಲ್ಲ. ನಿರೀಕ್ಷೆ ಇದ್ದೇ ಇದೆ. ಯಾರಿಗೆ ನಿರೀಕ್ಷೆ ಇರಲ್ಲ ಹೇಳಿ?, ರಾಜಕೀಯದಲ್ಲಿ ಇರುವವರಿಗೆ ದೂರದೃಷ್ಟಿ ಮತ್ತು ತಾಳ್ಮೆ ಅತ್ಯಗತ್ಯವಾಗಿ ಇರಬೇಕು’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಲಕ್ಷ್ಮಣ್ ಸವದಿ ‘ರಾಜಕೀಯದಲ್ಲಿ ಯಾರೂ ಸನ್ಯಾಸಿಗಳು ಅಲ್ಲ. ಎಲ್ಲರಿಗೂ ತಾವು ಸಚಿವರಾಗಬೇಕು, ನಂತರ ಡಿಸಿಎಂ ಆಗಬೇಕು, ಮುಖ್ಯಮಂತ್ರಿಯಾಗಬೇಕು ಎಂಬ ಆಸೆ-ನಿರೀಕ್ಷೆ ಇದ್ದೇ ಇರುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ ಕೇವಲ ಎರಡೂವರೆ ವರ್ಷವಷ್ಟೇ ಮುಖ್ಯಮಂತ್ರಿಯಾಗಿ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್​ ಸವದಿ ‘ಅದನ್ನ ನೀವು ಸಿದ್ದರಾಮಯ್ಯನವರ ಬಳಿಯೇ ಕೇಳಬೇಕು. ಹೈಕಮಾಂಡ್​​ನಲ್ಲಿ ಏನು ಚರ್ಚೆಯಾಗಿದೆ ನನಗೆ ಗೊತ್ತಿಲ್ಲ. ಅಂಥ ಮಾತುಕತೆಗಳೆಲ್ಲ ನಾಲ್ಕು ಗೋಡೆ ಮಧ್ಯೆ ಆಗುವಂಥದ್ದು. ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರ ಮಧ್ಯೆ ಏನು ಚರ್ಚೆಯಾಯಿತು ಎಂದು ಬಹಿರಂಗಪಡಿಸುವುದಿಲ್ಲ ಎಂದು ಹೇಳುವ ಮೂಲಕ ಲಕ್ಷ್ಮಣ್ ಸವದಿ ನುಣುಚಿಕೊಂಡಿದ್ದಾರೆ. ‘ಊಹಾಪೋಹಗಳು ನೂರೆಂಟು ಇರುತ್ತವೆ. ಅದಕ್ಕೆಲ್ಲ ಜನರು ರೆಕ್ಕೆಪುಕ್ಕ ಕಟ್ಟಿ ಮಾತಾಡುತ್ತಾರೆ’ ಎಂದೂ ಹೇಳಿದರು.

ಇದನ್ನೂ ಓದಿ: Karnataka Election 2023: ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ್‌ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್​ ನೀಡಿದ 5 ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಿದ ಲಕ್ಷ್ಮಣ್ ಸವದಿ ‘ಈ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ. ಮೊದಲು ಸಮೀಕ್ಷೆ ಮುಗಿಯಲಿ. ನಂತರ ಖಂಡಿತ ಸರ್ಕಾರದಿಂದ ಮಾರ್ಗಸೂಚಿ ಹೊರಬರುತ್ತದೆ’ ಎಂದು ಹೇಳಿದ್ದಾರೆ. ಲಕ್ಷ್ಮಣ್ ಸವದಿ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 1,27,615 ಮತಗಳನ್ನು ಪಡೆದಿದ್ದಾರೆ. ಅವರ ಸಮೀಪದ ಸ್ಪರ್ಧಿ, ಬಿಜೆಪಿಯ ಮಹೇಶ್​ ಈರನಗೌಡ ಕುಮಟಳ್ಳಿ 53,792 ಮತಗಳನ್ನು ಪಡೆದುಕೊಂಡಿದ್ದರು. ಒಟ್ಟಾರೆ ಸವದಿ 76 ಸಾವಿರ ಮತಗಳಿಂದ ಗೆದ್ದಿದ್ದಾರೆ.

Exit mobile version