Site icon Vistara News

Congress Protest | ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ 10 ಅಡಿ ಆಳದ ಚರಂಡಿಗೆ ಬಿದ್ದ ಯೂತ್‌ ಕಾಂಗ್ರೆಸ್ ಕಾರ್ಯಕರ್ತ

ಬೆಳಗಾವಿ: ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬ (Congress Protest) ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಚರಂಡಿಗೆ ಬಿದ್ದಿದ್ದಾನೆ. ಹಳೆ ಬೆಳಗಾವಿ ವೃತ್ತದಿಂದ ರ‍್ಯಾಲಿ ಬಂದ ಕಾರ್ಯಕರ್ತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಹೋಗಿದ್ದರು. ಆಗ ಕಾರ್ಯಕರ್ತ ಓಡಿಹೋಗುವಾಗ ಕಾಲು ಜಾರಿ ಚರಂಡಿಗೆ ಬಿದ್ದಿದ್ದಾನೆ.

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಆಡಳಿತ ನಿಷ್ಕ್ರಿಯತೆ ವಿರೋಧಿಸಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರು- ಕಾರ್ಯಕರ್ತರ ನಡುವೆ ನೂಕಾಟ- ತಳ್ಳಾಟ ನಡೆದಿತ್ತು. ಗುಂಪು ಚದುರಿಸಿ ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು. ಆಗ ಕಾರ್ಯಕರ್ತ ಚರಂಡಿ ಪಾಲಾಗಿದ್ದಾನೆ.

ಸುಮಾರು ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಕಾರ್ಯಕರ್ತನನ್ನು ಸ್ಥಳದಲ್ಲಿದ್ದ ಪೊಲೀಸರು, ಕಾರ್ಯಕರ್ತರೇ ಸೇರಿ ರಕ್ಷಣೆ ಮಾಡಿದರು. ಅದೃಷ್ಟವಶಾತ್‌ ಕಾರ್ಯಕರ್ತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮತ್ತೊಂದೆಡೆ ನೂಕಾಟದ ವೇಳೆ ನಲಪಾಡ್‌ ಧರಿಸಿದ್ದ ಶರ್ಟ್ ಹರಿದು ಹೋಯಿತು.

ರಾಜ್ಯ ಸರ್ಕಾರದ ವಿರುದ್ಧ ಯೂತ್‌ ಕಾಂಗ್ರೆಸ್ ಗುಡುಗು
ಯುವ ನಾಯಕ ಮಹ್ಮದ್ ನಲಪಾಡ್‌ ನೇತೃತ್ವದಲ್ಲಿ ಯಡಿಯೂರಪ್ಪ ರೋಡ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಯುವ ಘಟಕದ ಉಪಾಧ್ಯಕ್ಷ ಮೃಣಾಲ್‌ ಹೆಬ್ಬಾಳ್ಕರ್ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ‌ಸಮೀಪಿಸುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ಪೊಲೀಸರು ರ‍್ಯಾಲಿಯನ್ನು ತಡೆದರು. ಇದರಿಂದ ರೊಚ್ಚಿಗೆದ್ದ ಕೈ ಕಾರ್ಯಕರ್ತರು ರಸ್ತೆ ತಡೆ ನಡೆಸಲು ಮುಂದಾದರು. ಈ ವೇಳೆ ನಲಪಾಡ್ ಬ್ಯಾರಿಕೇಡ್ ಹಾರಲು ಹೋದಾಗ ಪೊಲೀಸರು ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ರ‍್ಯಾಲಿಗೂ ಮುನ್ನ ಮಾತನಾಡಿದ ಮಹ್ಮದ್ ನಲಪಾಡ್, ಬಿಜೆಪಿ ಸರ್ಕಾರ ಯುವಕರ ವಿರೋಧಿ ಸರ್ಕಾರ. ಮೊದಲು ನಮ್ಮ ದುಡ್ಡು ಕದ್ದರು, ಈಗ ನಮ್ಮ ವೋಟ್ ಕದಿಯುತ್ತಿದ್ದಾರೆ. ಯಾರಾದರೂ ಮಾತನಾಡಿದರೆ ಅವರ ಮೇಲೆ ಇಡಿ, ಐಟಿ ರೇಡ್ ಮಾಡಿಸುತ್ತಾರೆ. ಕಮೀಷನ್ ವಿರುದ್ಧ ಧ್ವನಿ ಎತ್ತಿದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಯ್ಯರನ್ನೂ ಬಂಧಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್ ನೀಡಿದರು. ಕೋವಿಡ್ ಬಳಿಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. 40% ಲಂಚದ ಸರ್ಕಾರದಿಂದ ಯುವಕರು ಭ್ರಮನಿರಸನಗೊಂಡಿದ್ದಾರೆ. ನಿಮ್ಮ ಪ್ರತಿಭಟನೆ ಮುಂದುವರಿಸಿ, ನಿಮ್ಮ ಜತೆಯಲ್ಲಿ ನಾವಿದ್ದೇವೆ ಎಂದರು.

ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ‌ಮಾತನಾಡಿ,‌ ‌ ಬಿಜೆಪಿ ಸರ್ಕಾರ ದುರಾಡಳಿತ ವಿರುದ್ಧ ಹೋರಾಟ ನಿರಂತರವಾಗಿ ನಡೆಸಬೇಕು. ಸರ್ಕಾರ ವಿರುದ್ಧ ಹೋರಾಟದಲ್ಲಿ ನಾವು ಜತೆಗೆ ಇರುತ್ತೇವೆ. ಸರ್ಕಾರದ ಜನವಿರೋಧಿ ನೀತಿಯನ್ನು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಇದನ್ನೂ ಓದಿ | Stone Quarry | ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಸ್ಥಳದಲ್ಲೆ ಇಬ್ಬರ ಸಾವು; ಮತ್ತೊಬ್ಬ ಗಂಭೀರ

Exit mobile version