Site icon Vistara News

Congress Protest: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ; ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

congress protest

ಬೆಂಗಳೂರು: ವಿಪಕ್ಷಗಳ 141 ಸಂಸದರ ಅಮಾನತು ಖಂಡಿಸಿ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಬುಧವಾರ ಪ್ರತಿಭಟನೆ (Congress Protest) ನಡೆಸಿದರು. ಸಂಸತ್ ಮೇಲಿನ ದಾಳಿಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿರುವುದು ಸರಿಯಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿ ಕೈಗೊಂಬೆಯಾಗಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದ್ದು, ಸಂಸತ್ ಮೇಲಿನ ದಾಳಿಗೆ ನೈತಿಕ ಹೊಣೆ ಹೊತ್ತು ಕೂಡಲೇ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿರುವ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಸರ್ವಾಧಿಕಾರಿಗಳೆಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಸಂಸತ್‌ ಮೇಲೆ ಕಿಡಿಗೇಡಿಗಳ ದಾಳಿ ನಡೆದರೆ, ವಿಪಕ್ಷಗಳ ಮೇಲೆ ಮೋದಿ, ಅಮಿತ್‌ ದಾಳಿ ಮಾಡುತ್ತಿದಾರೆ. ಸಂಸತ್‌ ರಕ್ಷಣೆ ಕೊಡಲು ವಿಫಲರಾದ ಮೋದಿ ಅಧಿಕಾರಲ್ಲಿ ಇರಲು ಅರ್ಹರಲ್ಲ. ಕಿಡಿಗೇಡಿಗಳಿಗೆ ಎಂಟ್ರಿ ಪಾಸ್‌ ಕೊಟ್ಟ ಸಂದ ಪ್ರತಾಪ್‌ ಸಿಂಹ ವಿರುದ್ಧ ಕ್ರಮ ಯಾಕಿಲ್ಲ ಎಂಬ ಬರವಣಿಗೆಯುಳ್ಳ ಭಿತ್ತಿ ಫಲಕಗಳನ್ನು ಹಿಡಿದು ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | KS Eshwarappa : ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನೂ ಉಳಿಸಲ್ಲ; ಈಶ್ವರಪ್ಪ ಶಪಥ

ಪ್ರತಾಪ್ ಸಿಂಹ ವಿರುದ್ಧ ತನಿಖೆ ಆಗಲೇಬೇಕು: ಬಿ.ಕೆ. ಹರಿಪ್ರಸಾದ್

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಂಸತ್‌ನಲ್ಲಿ ನಡೆದಿರುವ ಘಟನೆ ತಲೆ ತಗ್ಗಿಸುವ ವಿಚಾರ. ಇಷ್ಟು ಸಂಖ್ಯೆಯ ವಿಪಕ್ಷ ಸಂಸದರನ್ನು ಅಮಾನತು ಮಾಡಿರುವುದು ಇತಿಹಾಸದಲ್ಲೇ ಇಲ್ಲ. ಯಾರಿಗೂ ಗೊತ್ತಾಗದಂತೆ ಬಿಜೆಪಿಯ ತತ್ವ ಸಿದ್ಧಾಂತ ಜಾರಿಗೆ ತರುತ್ತಿದ್ದಾರೆ. ವಿಚಾರಗಳನ್ನು ಚರ್ಚೆ ಮಾಡುವುದು, ವಿನಿಮಯ ಮಾಡುವುದು, ಅನುಷ್ಠಾನ ಮಾಡುವುದು ಪದ್ಧತಿ. ಸಂಸತ್ ನಡೆಯುವಾಗ ಪ್ರಧಾನಿ, ಗೃಹ ಸಚಿವರು ಉತ್ತರ ಕೊಡಬೇಕಾಗುತ್ತದೆ. ಆದರೆ, ಇವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಕಿಡಿಕಾರಿದರು.

ದಾಳಿಕೋರರಿಗೆ ಅವಕಾಶ ಕೊಟ್ಟ ಪ್ರತಾಪ್ ಸಿಂಹರನ್ನು ಅಮಾನತು ಮಾಡಬೇಕಿತ್ತು, ಆದರೆ ಯಾವುದೇ ಕ್ರಮವಾಗಿಲ್ಲ. ರಸ್ತೆಯಿಂದ ಹಿಡಿದು ರಫೆಲ್ ತನಕ ಪ್ರತಾಪ್ ಮಾತನಾಡುವುದಷ್ಟೇ ಅಲ್ಲ, ಪ್ರತಾಪ್ ಸಿಂಹ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರ ವಿರುದ್ಧ ತನಿಖೆ ಆಗಲೇ ಬೇಕು. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸುತ್ತೇವೆ ಎಂದು ವಿಶ್ವಗುರು ಹೇಳಿಕೊಳ್ಳುತ್ತಾರೆ. ಅದೇ ವಿಶ್ವಗುರು ವಿಶ್ವದ ಮುಂದೆ ಭಾರತದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಬಗ್ಗೆ ಮಾತಾಡುವ ಮಟ್ಟಕ್ಕೆ ಆರ್. ಅಶೋಕ್ ಬೆಳೆದಿಲ್ಲ. ಬಿಜೆಪಿಯವರಿಗೆ ನಮ್ಮ ಲೋಪಗಳನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಬಿಜೆಪಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತೇ ಆಡಲಿಲ್ಲ. ಅದಕ್ಕೆ ಸಭಾಧ್ಯಕ್ಷ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಅವಕಾಶ ನೀಡಿದರು. ಆದರೆ, ಅಶೋಕ್ ಮನಸ್ಸು ಹುಲ್ಲಿನ ಮೆದೆಯಲ್ಲಿ ಸೂಜಿ ಹುಡುಕುತ್ತಿರುವ ಹಾಗಿದೆ. ಬಿಜೆಪಿಯಿಂದ ಯಾರಾದರೂ ಈ ಕಡೆ ಬರುತ್ತಾರಾ ಅಂತ ನೋಡಬೇಕಿದೆ. ಅಶೋಕ್ ಅವರು ಮೊದಲು ಅವರ ಪಕ್ಷ ಭದ್ರ ಮಾಡಿಕೊಳ್ಳಲು ನೋಡಲಿ ಎಂದರು.

ಇದನ್ನೂ ಓದಿ | Suraj Revanna: ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಚುನಾವಣಾ ತಕರಾರು ಅರ್ಜಿ ವಜಾ

ಸಿಎಂ ಬೆಂಬಲಿಗರಿಂದ ರಾಜ್ಯದಲ್ಲಿ ಅಹಿಂದ ಸಮಾವೇಶ ಆಯೋಜನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅಂತದ್ದಕ್ಕೆಲ್ಲಾ ಹೋಗಲ್ಲ.. ಜನವರಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಮಾವೇಶ ಇದೆ. ಗುರುನಾರಾಯಣ ಪೀಠದಿಂದ ಮಾಡುತ್ತಿದ್ದಾರೆ. ದೇಶಾದ್ಯಂತ ಜನ ಕರೆಸಿ ಮಾಡಬೇಕು ಎಂದು ಚರ್ಚೆ ನಡೆದಿದೆ. ನನ್ನ ಸಂಪೂರ್ಣ ಸಹಕಾರ ಕೇಳಿದ್ದಾರೆ ಎಂದು ತಿಳಿಸಿದರು.

Exit mobile version