Site icon Vistara News

Cyber Crime Awareness: ಪುತ್ರನ ನಾಮಕರಣ ಆಹ್ವಾನ ಪತ್ರಿಕೆಯಲ್ಲಿ ಸೈಬರ್‌ ಕ್ರೈಂ ಜಾಗೃತಿ ಮೂಡಿಸಿದ ಕಾನ್ಸ್‌ಟೇಬಲ್‌

naming ceremony invitation card

ಬನವಾಸಿ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ‌ಜಾಗೃತಿ ಕಾರ್ಯಗಳ ಮೂಲಕ ತಡೆಗಟ್ಟಲು ಪೊಲೀಸ್ ಇಲಾಖೆ ಸೇರಿ ಮಾಧ್ಯಮ, ಬ್ಯಾಂಕ್‌ಗಳು, ವಿವಿಧ ಸಂಪರ್ಕ ಸಾಧನ ಕಂಪನಿ, ಸಂಘ ಸಂಸ್ಥೆಗಳು ಶ್ರಮಿಸುತ್ತಿದೆ. ಆದರೆ ಇಲ್ಲೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ತಮ್ಮ ಮಗನ ನಾಮಕರಣ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ತುರ್ತುಪರಿಸ್ಥಿತಿ, ಮಕ್ಕಳ ಸಹಾಯ ವಾಣಿ ಹಾಗೂ ಕಳೆದು ಹೋದ ಮೊಬೈಲ್ ಗಳ ದುರ್ಬಳಕೆ ತಡೆಯುವ ಕುರಿತು ಜಾಗೃತಿ (Cyber Crime Awareness) ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ಎಂ ಎಸ್ ನಾರಾಯಣ

ಹೌದು, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪೋಲಿಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್.ನಾರಾಯಣ ಅವರು ನಾಮಕರಣ ಆಹ್ವಾನ ಪತ್ರಿಕೆಯಲ್ಲಿ ಸೈಬರ್‌ ಕ್ರೈಂ ಜಾಗೃತಿ ಮೂಲಕ ಗಮನ ಸೆಳೆದಿದ್ದಾರೆ. ಇವರು ಮೂಲತಃ ಹಾವೇರಿ ಜಿಲ್ಲೆಯ ತಿಲವಳ್ಳಿ ಗ್ರಾಮದವರು. ಎಂ.ಎ. ಬಿ.ಇಡಿ, ಡಿ.ಇಡಿ ಹಾಗೂ ನಾಟಕ ಕಲೆಯಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಸುಮಾರು 5 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕಳೆದ 5 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಂಗ ಕಲಾವಿದರಾದ ಇವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡುವುದರ ಜತೆಗೆ ನಾಟಕಗಳಲ್ಲಿ ಅಭಿನಯವನ್ನು ಮಾಡಿದ್ದಾರೆ. ಇವರ ಕಲಾ ಸೇವೆಗೆ ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ | Viral Video : ಮದುವೆ ಮನೆಯಲ್ಲಿ ಮಸ್ತ್‌ ಸ್ಟೆಪ್ಸ್‌ ಹಾಕಿದ ಫೋಟೋಗ್ರಾಫರ್‌!

ಪೊಲೀಸ್ ಇಲಾಖೆಯ ತರಬೇತಿ ಅವಧಿಯಲ್ಲಿ ಗೃಹಸಚಿವರಿಂದ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದರು. ಪೊಲೀಸ್ ಇಲಾಖೆಯಂತಹ ಬಿಡುವಿಲ್ಲದ ಇಲಾಖೆಯಲ್ಲಿದ್ದುಕೊಂಡು ಖಾಸಗಿ ಬದುಕಿನ ಕಾರ್ಯಕ್ರಮದಲ್ಲಿಯೂ ಕೂಡ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಮುಂದಾಗಿರುವ ಕಾನ್ಸ್‌ಟೇಬಲ್ ಎಮ್.ಎಸ್. ನಾರಾಯಣ ಅವರ ಜನಪರ ಕಾಳಜಿಯನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದಾರೆ.

naming ceremony invitation

Exit mobile version