ಬೆಂಗಳೂರು : ಭಾರತದ ಬೃಹತ್ ರೀಟೇಲ್ ಔಟ್‌ಲೆಟ್ ರಿಲಯನ್ಸ್ ರೀಟೇಲರ್ ವಿರುದ್ಧ ಬೆಂಗಳೂರಿನ ಗ್ರಾಹಕರೊಬ್ಬರು ಕೈ ಚೀಲಕ್ಕೆ ೨೪.೯ ರೂಪಾಯಿ ಬೆಲೆ ನಿಗದಿ ಮಾಡಿರುವ ಕೇಸ್ ಗೆದ್ದಿದ್ದಾರೆ. ಗ್ರಾಹಕ ನ್ಯಾಯಾಲಯವು ಇದು ನ್ಯಾಯಸಮ್ಮತವಲ್ಲದ ವ್ಯಾಪಾರ ಎಂದು ತೀರ್ಪು ನೀಡಿ ಅರ್ಜಿದಾರರಿಗೆ ೭೦೦೦ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಂಗಳೂರಿನ ರವಿ ಕಿರಣ್ ಸಿ ಎಂಬುವರು ರಿಲಯನ್ಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಗೆದ್ದವರು. ಗ್ರಾಹಕರ ಕೈಯಲ್ಲಿ ಬ್ಯಾಗ್ ಇಲ್ಲದಿರುವ ಸಂದರ್ಭವನ್ನು ರೀಟೆಲ್ ಸ್ಟೋರ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದಾಗಿ ರವಿ ಕಿರಣ್ ಅವರು ಕೋರ್ಟ್‌ನಲ್ಲಿ ವಾದಿಸಿದ್ದರು.
ರವಿಕಿರಣ್ ದಂಪತಿ ಕಳೆದ ಜುಲೈ ೧೦ರಂದು ನಂದಿನಿ ಲೇಔಟ್‌ನ ರಿಲಯನ್ಸ್ ರೀಟೆಲ್ ಸ್ಟೋರ್‌ಗೆ ತೆರಳಿದ್ದರು. ದೇವಸ್ಥಾನಕ್ಕೆ ಹೋಗಿ ವಾಪಸ್ ತೆರಳುವ ವೇಳೆ ಅವರು ದೀನಸಿ ಸಾಮಗ್ರಿಗಳನ್ನು ಖರೀದಿ ಮಾಡಲು ಹೋಗಿದ್ದ ಕಾರಣ ಮನೆಯಿಂದ ಬ್ಯಾಗ್ ತಂದಿರಲಿಲ್ಲ. ಅಂತೆಯೇ ಅವರು ೨,೦೦೭ ರೂಪಾಯಿಯ ಸಾಮಗ್ರಿಗಳನ್ನು ಖರೀದಿ ಮಾಡಿದ್ದರು. ಈ ವೇಳೆ ಅವರು ಬ್ಯಾಗ್ ಕೇಳಿದ್ದು, ೨೪.೯ ರೂಪಾಯಿ ಪಾವತಿಸುವಂತೆ ಕೋರಿದ್ದಾರೆ. ಅದಕ್ಕೆ ರವಿಕಿರಣ್ ಅವರು ಆಕ್ಷೇಪಿಸಿ ಉಚಿತವಾಗಿ ನೀಡುವಂತೆ ಕೋರಿದ್ದಾರೆ. ಅದಕ್ಕೆ ಬಿಲ್ಲಿಂಗ್ ಕೌಂಟರ್‌ನಲ್ಲಿ ಒಪ್ಪದ ಕಾರಣ ಹಣ ಪಾವತಿಸಿ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ವಿರೋಧಿಸಿ ರವಿಕಿರಣ್ ಅವರು ಬೆಂಗಳೂರು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ರವಿ ಕಿರಣ್ ಅವರ ಅರ್ಜಿ ಸ್ವೀಕರಿಸಿದ ನ್ಯಾಯಾಲಯ ರಿಲಯನ್ಸ್ ರಿಟೇಲ್‌ಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ರಿಲಯನ್ಸ್ ಪ್ರತಿನಿಧಿಗಳು ಕೋರ್ಟ್‌ಗೆ ಹಾಜರಾಗಿರಲಿಲ್ಲ. ಹೀಗಾಗಿ ಗ್ರಾಹಕರ ವಾದವನ್ನು ಒಪ್ಪಿಕೊಂಡ ಕೋರ್ಟ್ ೭ ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ರವಿ ಕಿರಣ್ ಅವರು, ದೀನಸಿ ವಸ್ತುಗಳನ್ನು ಮಾರಾಟ ಮಾಡುವ ರೀಟೇಲ್ ಸ್ಟೋರ್‌ಗಳು ಗ್ರಾಹಕರಿಗೆ ಬ್ಯಾಗ್‌ಗಳನ್ನು ಕೂಡ ನೀಡಬೇಕಾಗುತ್ತದೆ. ಗ್ರಾಹಕರ ಬಳಿ ಬ್ಯಾಗ್ ಇಲ್ಲದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಗ್ರಾಹಕರ ಹಕ್ಕಿನ ಉಲ್ಲಂಘನೆ ಹಾಗೂ ಮೋಸದ ವ್ಯಾಪಾರ ಎಂದು ಹೇಳಿದ್ದರು.
ಇದನ್ನೂ ಓದಿ | Reliance Jio | ಜಿಯೋ, ಏರ್ಟೆಲ್‌ಗೆ ಹೆಚ್ಚಿದ ಗ್ರಾಹಕರು, ವೋಡಾಫೋನ್ ತೊರೆದರು ಬಹುತೇಕರು!