ಕೊಪ್ಪಳ: ಇಲ್ಲಿನ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ, ಭೇದಿಯಿಂದ ಬಾಲಕಿಯೊಬ್ಬಳು (Contaminated Water) ಮೃತಪಟ್ಟಿದ್ದಾಳೆ. ನಿರ್ಮಲಾ ಈರಪ್ಪ ಬೆಳಗಲ್ (10) ಮೃತ ಬಾಲಕಿಯಾಗಿದ್ದಾಳೆ. ಬುಧವಾರ ರಾತ್ರಿ (ಜೂ.7) ತೀವ್ರ ವಾಂತಿ ಭೇದಿ ಕಾಣಿಸಿಕೊಂಡಿದ್ದು, ನಿರ್ಮಲಾ ಅಸ್ವಸ್ಥಗೊಂಡಿದ್ದಳು.
ಗುರುವಾರ ಬೆಳಗಿನ ಜಾವ ನಿರ್ಮಲಾಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಉಸಿರು ನಿಲ್ಲಿಸಿದ್ದಾಳೆ. ಬಿಜಕಲ್ ಗ್ರಾಮದಲ್ಲಿ ಇಲ್ಲಿಯವರೆಗೂ 45 ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಇನ್ನು ನಿರ್ಮಲ ಪೋಷಕರು ದುಡಿಯಲು ಕೇರಳಕ್ಕೆ ಹೋಗಿದ್ದು, ಅತ್ತೆಯ ಮನೆಯಲ್ಲಿ ಈಕೆಯನ್ನು ಬಿಟ್ಟು ಹೋಗಿದ್ದರು. ಬುಧವಾರ ರಾತ್ರಿ ನಿರ್ಮಲಗೆ ವಾಂತಿ ಭೇದಿ ಆಗುತ್ತಿತ್ತು. ಹೀಗಾಗಿ ಪ್ರಾಥಮಿಕ ಚಿಕಿತ್ಸೆಗೆಂದು ಗುರುವಾರ ಬೆಳಗ್ಗೆ ಬಿಜಕಲ್ ಗ್ರಾಮದಲ್ಲಿದ್ದ ಆರೋಗ್ಯ ಕೇಂದ್ರಕ್ಕೆ ಕರೆದು ಹೋಗಿದ್ದರು. ಆದರೆ ಅಲ್ಲಿ ಹೆಚ್ಚು ರೋಗಿಗಳಿದ್ದ ಕಾರಣಕ್ಕೆ ಕುಷ್ಟಗಿಗೆ ಕಳುಹಿಸಲಾಗಿತ್ತು. ಆದರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಡಿಯುವ ನೀರಿನಿಂದಲೆ ವಾಂತಿ ಭೇದಿಯಾಗಿ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿಯ ಸಂಬಂಧಿಕರು ಆರೋಪಿಸಿದ್ದಾರೆ.
ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭ
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಯಿಂದ ಬಾಲಕಿ ಮೃತಪಟ್ಟ ಹಿನ್ನೆಲೆ ಸ್ಥಳಕ್ಕೆ ಡಿಎಚ್ಓ ಡಾ.ಅಲಕಾನಂದ ಮಳಗಿ, ಟಿಎಚ್‌ಓ ಡಾ. ಆನಂದ ಗೋಟೂರು, ಇಓ ಶಿವಪ್ಪ ಸುಭೇದಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಾ ಅಲಕಾನಂದ ಮಳಗಿ, ಗ್ರಾಮದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಜತೆಗೆ ಬಾಲಕಿಯ ಸಾವಿನ ಬಗ್ಗೆ ತಜ್ಞರ ವರದಿ ಬರುತ್ತದೆ. ಆ ಬಳಿಕ ಕಲುಷಿತ ನೀರಿನಿಂದ ಮೃತಪಟ್ಟಿರುವುದಾ? ಇಲ್ಲವಾ? ಎಂಬುದು ತಿಳಿಯಲಿದೆ. ಸದ್ಯ, ಬಾಲಕಿಯ ಮೃತದೇಹವನ್ನು ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್ ಹಿಡಿದು ಓಡೋಡಿ ಬಂದ!
ಬಸರಿಹಾಳ ಗ್ರಾಮದ ಶಾಲೆಗಳಿಗೆ ರಜೆ
ಕಳೆದ ಸೋಮವಾರ (ಜೂ.5) ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ 9 ತಿಂಗಳ ಹಸುಳೆ ಸೇರಿ 60 ವರ್ಷದ ವೃದ್ಧೆ ಮೃತಪಟ್ಟಿದ್ದರು. ಇದೀಗ ಬಸರಿಹಾಳ ಗ್ರಾಮದಲ್ಲಿ ಕಾಲರಾ ಸೋಂಕು (Cholera disease) ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆರೋಗ್ಯ ಸುರಕ್ಷತಾ ಹಿತದೃಷ್ಟಿಯಿಂದ ಮೂರು ದಿನಗಳ ರಜೆ ಘೋಷಣೆ (holiday announced) ಮಾಡಲಾಗಿದೆ. ಜೂ 7ರಿಂದ 9ರವರೆಗೆ ರಜೆ ನೀಡಲಾಗಿದೆ. ಈಗ ಪಕ್ಕದ ಬಿಜಕಲ್ ಗ್ರಾಮದಲ್ಲೂ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಳ್ಳುತ್ತಿದ್ದು, ಆತಂಕ ಹೆಚ್ಚಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ