ತುಮಕೂರು: ಇಲ್ಲಿನ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ತಾತಯ್ಯನ ಗುಡಿಯ ಬಳಿ ಕಲುಷಿತ ನೀರು ಸೇವಿಸಿ 10 ಜನರು ಅಸ್ವಸ್ಥಗೊಂಡಿದ್ದಾರೆ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.
ಗೇಟ್ ವಾಲ್‌ಗಳ ಮೂಲಕ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿದೆ. ನಲ್ಲಿ ನೀರು ಕುಡಿದ 10ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಜತೆಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಕೂಡಲೇ ಅಸ್ವಸ್ಥರನ್ನು ಪಾವಗಡ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ತಹಸೀಲ್ದಾರ್ ಸುಜಾತಾ, ಇಒ ಶಿವರಾಜಯ್ಯ ಹಾಗೂ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ!
ಪಾವಗಡ ತಾಲೂಕಿನ ವೈನ್ ಹೊಸಕೋಟೆ ಪಟ್ಟಣದ ಬೆಸ್ತರಹಳ್ಳಿ ರಸ್ತೆ ಹೊಂದಿಕೊಂಡಿರುವ ತಾತಯ್ಯನ ಗುಡಿ ಹಿಂಭಾಗದ ಹಾಗೂ ಡಿ ಬ್ಲಾಕ್ ನ ಕೆಲ ನಿವಾಸಿಗಳು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. 10ಕ್ಕೂ ಹೆಚ್ಚು ಜನರನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಬಡ ವರ್ಗದ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಮುಖ್ಯವಾಗಿ ಈ ಭಾಗದಲ್ಲಿ ಸ್ಥಳೀಯ ಆಡಳಿತ ಸೇರಿದಂತೆ ಅಧಿಕಾರಿ ವರ್ಗದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಕೊಳಾಯಿಯಿಂದ ಪೂರೈಕೆ ಆಗುವ ನೀರಿನ ಸರಬರಾಜು ಪಟ್ಟಣದ ಗೇಟ್ ವಾಲ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಅದರಲ್ಲಿ ಕಸ ಕಡ್ಡಿ, ಕ್ರಿಮಿಕೀಟಗಳು ಸೇರಿಕೊಂಡಿವೆ. ಇಂತಹ ಸುಮಾರು 30 ಗೆಟ್ ವಾಲ್‌ಗಳಿದೆ. ಬಹುಪಾಲು ಈ ಗುಂಡಿಗಳಲ್ಲಿ ಶೇಖರಣೆಗೊಂಡ ನೀರು ಕೆಟ್ಟು ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನಲ್ಲಿ ಮಿಶ್ರಣವಾಗುತ್ತಿರುವುದು ಅಸ್ವಸ್ಥತೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿದ 33 ಮಂದಿ ಅಸ್ವಸ್ಥ
ಇತ್ತೀಚೆಗೆ ಚಿತ್ರದುರ್ಗದ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲೂ ಕಲುಷಿತ ನೀರು (Contaminated Water) ಸೇವಿಸಿ 33 ಮಂದಿ ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಓಬಕ್ಕ ಹಾಗೂ ಚಾಮುಂಡಮ್ಮ ಎಂಬುವವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ (VIMS Bellary) ಶಿಫ್ಟ್ ಮಾಡಲಾಗಿತ್ತು. ಜುಲೈ 12ರ ಸಂಜೆ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದರು. ಗ್ರಾಮದಲ್ಲಿ ಚಿಕಿತ್ಸೆಗಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಆರಂಭ ಮಾಡಲಾಗಿತ್ತು. ಅದೇ ರೀತಿ ರಾಂಪುರ ಆರೋಗ್ಯ ಕೇಂದ್ರದಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗಿತ್ತು.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ಕಲುಷಿತ ನೀರು ಪೂರೈಕೆಯಾಗಿತ್ತು. ಜೆಜೆಎಂ ಯೋಜನೆಯ ಪೈಪ್‌ಲೈನ್ ಮಾಡುವ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿತ್ತು. ಆದರೆ, ಪೈಪ್‌ಲೈನ್ ಸರಿ ಮಾಡದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಸೇರಿಕೊಂಡು ಸರಬರಾಜು ಆಗಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಕಲುಷಿತ ನೀರಿನ ಮಾದರಿಯನ್ನು ಲ್ಯಾಬ್ ಟೆಸ್ಟಿಂಗ್‌ಗೆ ರವಾನೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಎಂದು ಬಹಿರಂಗವಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ರಾಂಪುರ ಆರೋಗ್ಯ ಕೇಂದ್ರಕ್ಕೆ ಶಾಸಕ ಎನ್. ವೈ. ಗೋಪಾಲಕೃಷ್ಣ ಭೇಟಿ ನೀಡಿ, ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ