ರಾಯಚೂರು: ಬಿಸಿಲ ನಾಡು ರಾಯಚೂರಲ್ಲಿ ಜೀವಜಲವೇ ವಿಷಪೂರಿತವಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಲುಷಿತ ನೀರು ಪೂರೈಕೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ರೇಖಲಮರಡಿ ಗ್ರಾಮ ಬಳಿಕ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರಿನಿಂದ ಜನರಿಗೆ ಕಿಡ್ನಿ ವೈಫಲ್ಯವಾಗಿದೆ. ಮೂರು ಜನರ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲಿಂಗಸಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, 2-3 ದಿನಗಳಿಂದ ತೀವ್ರ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ವೇಳೆ ಸುಮಾರು 3 ಜನರಿಗೆ ಕಿಡ್ನಿ ವೈಫಲ್ಯ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಮೂವರಿಗೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಮೊಕ್ಕಾಂ ಹೂಡಿದ ಆರೋಗ್ಯ ಇಲಾಖೆ
ಗೊರೆಬಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಶೀಲನೆಗಾಗಿ ನೀರಿನ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ರವಾನಿಸಲಾಗಿದೆ.
ಶುದ್ಧೀಕರಣ ಘಟಕ ಸ್ಥಗಿತ
ಗೊರೆಬಾಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ. ಹೀಗಾಗಿ ಗ್ರಾಮದಲ್ಲಿ ದಿನ ನಿತ್ಯ ಫೈಪ್ ಲೈನ್ ನೀರು ಕುಡಿದು ಜೀವನ ನಡೆಸುತ್ತಿದ್ದಾರೆ. ಶುದ್ಧೀಕರಣ ಘಟಕ ನಿರ್ಮಾಣ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಶುದ್ಧೀಕರಣ ಘಟಕದ ಬಳಿಯೇ ಮಹಿಳೆಯರ ಬಯಲು ಶೌಚವಿದೆ. ಈ ಹಿನ್ನೆಲೆಯಲ್ಲಿ ಶುದ್ಧೀಕರಣ ಘಟಕದ ನೀರು ಕುಡಿಯಲು ಹಿಂದೇಟು ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮೊದಲಿನಿಂದಲೂ ನೀರಿನ ಸಮಸ್ಯೆ ನಮ್ಮಲ್ಲಿ ಇರಲಿಲ್ಲ. ಆದರೆ, ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲ. ಚರಂಡಿ ನೀರು ಮಿಶ್ರಣವಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಹಾರೋ ಪ್ಲಾಂಟ್ ಇದ್ದರೂ ಜನರ ಉಪಯೋಗಕ್ಕೆ ಬಂದಿಲ್ಲ. ಹಾರೋ ಪ್ಲಾಂಟ್ ಬಳಿ ಮಹಿಳೆಯರು ಬಯಲು ಶೌಚ ಮಾಡುತ್ತಾರೆ. ಆ ಕಾರಣಕ್ಕಾಗಿ ಯಾರೂ ಕೂಡ ಹಾರೋ ಪ್ಲಾಂಟ್ ಬಳಕೆ ಮಾಡುತ್ತಿಲ್ಲ. ಖಾಸಗಿ ಜಮೀನಿಂದ ಬರುವ ನೀರನ್ನೇ ಕುಡಿದು ಜೀವನ ಮಾಡುತ್ತೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ವಿಸ್ತಾರ ನ್ಯೂಸ್ ಮುಂದೆ ಕಣ್ಣೀರಿಟ್ಟ ಮಹಿಳೆ
ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರಿನ ದುರಂತ ಪ್ರಕರಣ ಸಂಬಂಧ ಮಹಿಳೆಯ ಗೋಳಾಟ ಒಂದೆರಡಲ್ಲ. ಮಹಿಳೆಯೊಬ್ಬರು ವಿಸ್ತಾರ ನ್ಯೂಸ್ ಮುಂದೆ ಕಣ್ಣೀರು ಹಾಕಿದ್ದಾರೆ. ಹೊಲದಲ್ಲಿ ಕೆಲಸ ಮಾಡಿ ನೇರವಾಗಿ ಆಸ್ಪತ್ರೆಗೆ ಬಂದಿದ್ದೇವೆ. ನಾವೇನೋ ನಮ್ಮ ಕಷ್ಟವನ್ನು ಹೇಳ್ತೇವೆ, ಆದರೆ ಚಿಕ್ಕ ಮಕ್ಕಳ ಪಾಡೇನು? ಮನೆಯಲ್ಲಿ ಮಕ್ಕಳು, ದನಕರುಗಳು ಬಿಟ್ಟು ಬಂದಿದ್ದೇವೆ. 3 ದಿನದಿಂದ ಊಟ ಇಲ್ಲ, ಬರೀ ಹಣ್ಣೀನ ರಸ, ಗಂಜಿ ಕೊಡುತ್ತಿದ್ದಾರೆ. ನಮ್ಮ ತಂಗಿ ಸ್ಥಿತಿ ಬಹಳ ಚಿಂತಾಜನಕವಾಗಿದೆ. ವೈದ್ಯರು ಕರೆದುಕೊಂಡು ಹೋಗಿ ಎಂದಿದ್ದಾರೆ ಎಂದು ಕಷ್ಟ ತೋಡಿಕೊಂಡಿದ್ದಾರೆ.
ಟ್ರಾವೆಲ್ ಹಿಸ್ಟರಿ ಪರಿಶೀಲನೆ
ಗೊರೆಬಾಳ ಗ್ರಾಮಸ್ಥರಿಗೆ ಚಿಕೆತ್ಸೆ ನೀಡುತ್ತಿರುವ ವೈದ್ಯರು ಪ್ರತಿಕ್ರಿಯಿಸಿದ್ದು, 3 ದಿನಗಳ ಹಿಂದೆ ಒಂದೇ ಗ್ರಾಮದ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಕಲುಷಿತ ನೀರು ಸೇವನೆ ಮಾಡಿರುವುದು ತಿಳಿದು ಬಂದಿದೆ. ಮೂರು ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಸ್ವಸ್ಥಗೊಂಡವರ ಟ್ರಾವೆಲ್ ಹಿಸ್ಟರಿ ಚೆಕ್ ಮಾಡಲಾಗಿದೆ. ಮದುವೆ ಸಮಾರಂಭ, ಜಾತ್ರೆಗಳಿಗೆ ತೆರಳಿಲ್ಲ. ಹೀಗಾಗಿ ಊರಿನ ನೀರು ಕಲುಷಿತ ಆಗಿದೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದೇವೆ. ರೋಗಿಗಳಿಗೆ ಒಂದೇ ದಿನಕ್ಕೆ 25 ಸಲ ವಾಂತಿ ಭೇದಿ ಆಗಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿರುವುದರಿಂದ ಕಿಡ್ನಿ ವೈಫಲ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: New Parliament Building: ಸಂಸತ್ ಭವನದಲ್ಲಿ ಮೊಳಗಿದ ’ಮೋದಿ‘ ಘೋಷ; ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಸಂಭ್ರಮ
ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕ
ರೇಕಲಮರಡಿ ಗ್ರಾಮದಲ್ಲಿ ಕಲುಷಿತಗೊಂಡ ನೀರು ಸೇವಿಸಿದ್ದರಿಂದ ವಾಂತಿ-ಭೇದಿ ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿರವಾರ ಸರ್ಕಾರಿ ಆಸ್ಪತ್ರೆ ಸೇರಿದ್ದ ಹನುಮೇಶ್ (5) ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೇ 26ರಂದು ಮೃತಪಟ್ಟಿದ್ದ. ಇನ್ನು ಹನುಮೇಶ್‌ನ ಅಕ್ಕ ನರಸಮ್ಮ (8) ಕೂಡ ಅಸ್ವಸ್ಥಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ