ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿರುವುದು (Karnataka Election) ರಾಜಕೀಯವಾಗಿ ಅವರಿಗೆ ಮಾರಕವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ನಮ್ಮದೇನೂ ತಕರಾರಿಲ್ಲ. ನಾವು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಏನು ವ್ಯೂಹ ಮಾಡಬೇಕೋ ಅದನ್ನು ಮಾಡುತ್ತೇವೆ. ಆದರೆ ಸಿದ್ದರಾಮಯ್ಯನವರ ನಿರ್ಧಾರ ರಾಜಕೀಯವಾಗಿ ಮಾರಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆಯಿಂದ ಕೋಲಾರ, ಚಿಕ್ಕಬಳ್ಳಾಪುರದ ಒಟ್ಟಾರೆ ಚುನಾವಣೆ ಮೇಲೆ ಯಾವುದೇ ಯಾವುದೇ ಪ್ರಭಾವ ಬೀರುವುದಿಲ್ಲ. ನಿಜವೆಂದರೆ ಕಾಂಗ್ರೆಸ್‌ಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆಯೇ ಹೆಚ್ಚು ಎಂದ ಸುಧಾಕರ್, ಕೋಲಾರಕ್ಕೂ ಸಿದ್ದರಾಮಯ್ಯ ಅವರಿಗೂ ವಿಶೇಷವಾದ ಸಂಬಂಧ ಇಲ್ಲ. ಜಾತಿ ಮತಗಳ ಲೆಕ್ಕಾಚಾರದ ಮೇಲೆ ಕೋಲಾರ ಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ ಎಂದರು.
ʻʻಕೋಲಾರದಲ್ಲಿ ಕೆಲವರ ಬೇರುಗಳು ಅಲ್ಲಾಡುತ್ತಿವೆ. ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಲು ಅವರನ್ನು ಇಲ್ಲಿಗೆ ಬರುವಂತೆ ದುಂಬಾಲು ಬಿದ್ದಿದ್ದಾರೆʼʼ ಎಂದ ಸುಧಾಕರ್, ಸಿದ್ದರಾಮಯ್ಯ ಅವರು ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೆ ಯಾಕೆ ಹೋಗ್ತಿದ್ದಾರೆ ಅಂತ ಅವರನ್ನೇ ಕೇಳಬೇಕು ಎಂದರು.
ನಮ್ಮ ದಾರಿ ಈಗ ಬೇರೆ ಬೇರೆ
ʻʻಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವ ಇದೆ. ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ನಾಯಕರಾಗಿ ಜೊತೆಯಲ್ಲಿದ್ದೆವು. ಹಾಗಾಗಿ ಅವರ ಬಗ್ಗೆ ವಿಶ್ವಾಸವಿದೆ. ಈಗ ಅವರ ಪಕ್ಷ ಬೇರೆ ನನ್ನ ಪಕ್ಷ ಬೇರೆ ಇದೆ ನಮ್ಮ ದಾರಿ ಬೇರೆ ಇದೆ. ಕೋಲಾರವನ್ನು ಅದೇನೇ ಆದರೂ ಗೆಲ್ಲಬೇಕು ಅಂತ ತೀರ್ಮಾನ ಮಾಡಿದ್ದೇವೆ. ಬಿಜೆಪಿ ಅಭ್ಯರ್ಥಿಯೇ ಕೋಲಾರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂಬ ನಂಬಿಕೆ ನನಗಿದೆʼʼ ಎಂದು ಸುಧಾಕರ್ ಹೇಳಿದರು.
ಸೋಮಶೇಖರ್ ಹೇಳಿಕೆಗೆ ವಿಶೇಷಾರ್ಥ ಬೇಡ
ಸುಧಾಕರ್ ಸಿಎಂ ಆಗುವ ಅರ್ಹತೆ ಇರುವ ರಾಜಕಾರಣಿ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದೆ ಉತ್ತಮ ಭವಿಷ್ಯ ಇದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಹಾಗಾಗಿ ಅದಕ್ಕೆ ವಿಶೇಷವಾದ ಅರ್ಥ ಕಲ್ಪಿಸೋದು ಬೇಡ. ಅವರ ಪ್ರೀತಿಯನ್ನ ತೋರಿಸುತ್ತದೆ ಹೊರತು ಪ್ರಾಯೋಗಿಕವಾಗಿ ಅರ್ಥ ಕಲ್ಪಿಸೋದು ಬೇಡ ಎಂದರು.
ಬೆಂಬಲಿಗನ ಹುಟ್ಟುಹಬ್ಬದಲ್ಲಿ ಭರ್ಜರಿ ಬಾಡೂಟ!
ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಅವರ ಬೆಂಬಲಿಗ ಕೆ.ವಿ. ನಾಗರಾಜ್ ಅವರು ತಮ್ಮ ೬೯ನೇ ಹುಟ್ಟುಹಬ್ಬವನ್ನು ಮಂಗಳವಾ ಭರ್ಜರಿಯಾಗಿ ಆಚರಿಸಿಕೊಂಡರು. ಇದಕ್ಕೆ ಸುಧಾಕರ್ ಆಗಮಿಸಿದ್ದರು. ಹುಟ್ಟುಹಬ್ಬದ ಅಂಗವಾಗಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಕೆ.ವಿ ನಾಗರಾಜ್ ಅವರು ಕರ್ನಾಟಕ ರಾಜ್ಯ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾಗಿದ್ದು, ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಬಳಿ ಭರ್ಜರಿ ಬಾಡೂಟ ಆಯೋಜನೆ ಮಾಡಲಾಗಿದೆ. ಸುಮಾರು ೫೦೦೦ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಟನ್ ಬಿರಿಯಾನಿ, ಚಿಕನ್ ಫ್ರೈ, ಚಿಕನ್ ಸಾಂಬಾರ್, ಚಿಲ್ಲಿ ಚಿಕನ್, ಮುದ್ದೆ ಸವಿದು ಬೆಂಬಲಿಗರು ಖುಷಿಪಟ್ಟರು. ಆರೋಗ್ಯ ಸಚಿವ ಸುಧಾಕರ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.
ಇದನ್ನೂ ಓದಿ | Karnataka Election | ಬಿಜೆಪಿಯಲ್ಲಿ ದಲಿತರು, ಹಿಂದುಳಿದವರು, ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ