ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ (Heavy rain) ಮುಂದುವರಿದಿದ್ದು, ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿರುವ ಹಿನ್ನಲೆ ಗಂಗಾವಳಿ ನದಿ (Gangavali river) ಮೈದುಂಬಿ ಹರಿಯುತ್ತಿರುವ ಪರಿಣಾಮ ಅಂಕೋಲಾ (Ankola) ಭಾಗದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ.
ಭಾನುವಾರ ಸಂಜೆಯಿಂದಲೂ ಸಹ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಜನರು ಭಯದಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಗಂಗಾವಳಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ನದಿತೀರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ.
ಇದನ್ನೂ ಓದಿ: ISRO Launch: ಜುಲೈ 30ಕ್ಕೆ 6 ಸಹ ಪ್ರಯಾಣಿಕರ ಸಹಿತ ಉಪಗ್ರಹ ಲಾಂಚ್ ಮಾಡಲಿದೆ ಇಸ್ರೋ!
ಬಿಳಿಹೊಂಯ್ಗಿಯಲ್ಲಿ ಪ್ರವಾಹ ಭೀತಿ
ಗಂಗಾವಳಿ ಸಮೀಪವೇ ಇರುವ ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಸುಮಾರು 20ಕ್ಕೂ ಅಧಿಕ ಮನೆಗಳ ಅಂಗಳಕ್ಕೆ ನೀರು ಬಂದಿದೆ. ಅಲ್ಲದೇ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿದೆ. ಈ ಭಾಗದಲ್ಲಿ ಕಳೆದ 4 ವರ್ಷಗಳಿಂದ ನಿರಂತರವಾಗಿ ಪ್ರವಾಹ ಎದುರಾಗುತ್ತಿರುವ ಕಾರಣ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಗಂಗಾವಳಿ ನದಿ ಸಮೀಪದ ದಂಡೆಭಾಗದಲ್ಲಿ ಖಾರ್ಲ್ಯಾಂಡ್ ಒಡ್ಡು ಒಡೆದ ಪರಿಣಾಮ ಬಿಳಿಹೊಂಯ್ಗಿ ಗ್ರಾಮದಲ್ಲಿ ನಿರಂತರ ನೆರೆ ಹಾವಳಿ ಸೃಷ್ಟಿಯಾಗುವಂತಾಗಿದೆ. ಕೂಡಲೇ ಖಾರ್ಲ್ಯಾಂಡ್ ಸರಿಪಡಿಸಿ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಗತ್ಯ ವಸ್ತುಗಳ ಸ್ಥಳಾಂತರಕ್ಕೆ ಮುಂದಾದ ನಿವಾಸಿಗಳು
ನಿರಂತರವಾಗಿ ನೆರೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರು ಕೂಡ ಮನೆಯಲ್ಲಿನ ಅಕ್ಕಿ, ಬಟ್ಟೆ, ಬಂಗಾರ ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಜತೆಗೆ ನೀರು ಹೆಚ್ಚಾದಲ್ಲಿ ಮನೆಯ ಇನ್ನುಳಿದ ವಸ್ತುಗಳನ್ನೂ ಸಾಗಾಟ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಮನೆಗಳ ಸುತ್ತ ನೀರು ನಿಂತಿರುವ ಹಿನ್ನಲೆ ಬೋಟುಗಳ ಮೂಲಕವೇ ವಸ್ತುಗಳನ್ನು ಸಾಗಿಸಬೇಕಾಗಿದೆ. ಸದ್ಯ ನೀರಿನ ಪ್ರಮಾಣ ಕಡಿಮೆಯಿದ್ದು, ನೀರು ಹೆಚ್ಚಾದಲ್ಲಿ ಮಾತ್ರ ಕಾಳಜಿ ಕೇಂದ್ರಕ್ಕೆ ತೆರಳುವುದಾಗಿ ನಿವಾಸಿಗಳು ತಿಳಿಸಿದ್ದಾರೆ.
ತುರ್ತು ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ
ನೆರೆ ಪ್ರದೇಶದಲ್ಲಿ ಇಲ್ಲಿನ ಹೊನ್ನೇಬೈಲ್ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿ ನೀರು ನುಗ್ಗುವ ಆತಂಕವಿರುವ ಮನೆಗಳಿಗೆ ತೆರಳಿ ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಿಳಿಸುತ್ತಿದ್ದಾರೆ. ಸಮೀಪದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನೆರೆ ಹೆಚ್ಚಾದಲ್ಲಿ ಜನರನ್ನು ಸ್ಥಳಾಂತರ ಮಾಡಲು ದೋಣಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗಣಪತಿ ನಾಯ್ಕ ತಿಳಿಸಿದ್ದಾರೆ.
ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು
ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹೊನ್ನಾವರದ ರಾಮತೀರ್ಥದಲ್ಲಿ ನಡೆದಿದೆ. ಪಟ್ಟಣದ ರಾಯಲಕೇರಿ ನಿವಾಸಿಯಾಗಿದ್ದ ಮಣಿಕಂಠ ಮಂಜುನಾಥ ನಾಯ್ಕ(17) ಮೃತ ದುರ್ದೈವಿಯಾಗಿದ್ದಾನೆ. ಪಟ್ಟಣದ ಮೋಹನ ಕೆ ಶೆಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಮಣಿಕಂಠ ಸೋಮವಾರ ಮಳೆ ಹಿನ್ನಲೆ ಕಾಲೇಜಿಗೆ ರಜೆ ಇದ್ದಿದ್ದರಿಂದ ಈಜಲು ರಾಮತೀರ್ಥಕ್ಕೆ ತೆರಳಿದ್ದ. ನೀರಲ್ಲಿ ಈಜುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದು ಸ್ಥಳೀಯರ ಸಹಾಯದಿಂದ ಪೊಲೀಸರು ಶವವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Diamond Cross 11: ಸದ್ಯದಲ್ಲೇ ತೆರೆಗೆ ಬರಲಿದೆ ಡೈಮಂಡ್ ಕ್ರಾಸ್ 11 ಸಿನಿಮಾ
ಜು.25 ರಂದು ರಜೆ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶ
ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನಲೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಜುಲೈ 25 ರಂದು ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಹವಾಮಾನ ಇಲಾಖೆ ಜುಲೈ 25 ರಂದು ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದಾಗಿ ರೆಡ್ ಅಲರ್ಟ್ ನೀಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಎಲ್ಲೆಡೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನಲೆ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಎಲ್ಲ ತಾಲೂಕುಗಳ ಅಂಗನವಾಡಿ, ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆಯೂ ರಜೆ ಮುಂದುವರೆಸಲಾಗಿದೆ.