ಅನಿಲ್ ಕಾಜಗಾರ, ಬೆಳಗಾವಿ
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಉಪಯೋಗವಾಗದ ಹಿನ್ನೆಲೆಯಲ್ಲಿ, ಮೆದುಳು ಜ್ವರದಿಂದ ಬಳಲುತ್ತಿದ್ದ ಏಳೂವರೆ ವರ್ಷದ ಮಗನನ್ನು ಶಿಲುಬೆ ಎದುರು ಮಲಗಿಸಿ ತಂದೆ – ತಾಯಿ ಮೊರೆ ಇಟ್ಟರು. ಈ ಮನಕಲಕುವ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಂಬರವಾಡಾ ಗ್ರಾಮದ ಕೃಷ್ಣಾ ಮತ್ತು ಮಹಾದೇವಿ ದಂಪತಿ ಪುತ್ರ ಶೈಲೇಶ್ ಮೆದುಳು ಜ್ವರದಿಂದ ಬಳಲುತ್ತಿರುವ ಬಾಲಕ. ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುವ ದಂಪತಿಗೆ ಐವರು ಮಕ್ಕಳಿದ್ದು, ಅವರಲ್ಲಿ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ. ಚೆನ್ನಾಗಿ ಓಡಾಡಿಕೊಂಡಿದ್ದ ಶೈಲೇಶ್‌ಗೆ ಇದ್ದಕ್ಕಿದ್ದಂತೆ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದ ದಂಪತಿ ನಾಟಿ ಔಷಧ ಸಹ ನೀಡಿದ್ದರು.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗಳಲ್ಲೂ ಎರಡು ತಿಂಗಳು ಚಿಕಿತ್ಸೆ ಕೊಡಿಸಿದರು. ಆದರೆ ವೈದ್ಯರು ಮಗು ಬದುಕುವ ಸಾಧ್ಯತೆ ಕಡಿಮೆ, ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದ ಅಸಹಾಯಕ ತಂದೆ ತಾಯಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಬಳಿಯ ಐತಿಹಾಸಿಕ ಶಿಲುಬೆ ಎದುರು ಮಗುವನ್ನು ಮಲಗಿಸಿ ಪ್ರಾರ್ಥನೆ ಮಾಡಿ ಕಣ್ಣೀರಿಟ್ಟರು.
ಈ ಬಗ್ಗೆ ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಸಮಾಜ ಸೇವಾ ಸಂಘಟನೆಗೆ ಗೊತ್ತಾಗಿದ್ದು, ತಂಡದ ಸದಸ್ಯರು ತಕ್ಷಣ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದು, ಬೆಳಗಾವಿಯ ಯಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಮಗುವಿನ ತಾಯಿ ಮಹಾದೇವಿ ಕಣ್ಣೀರಿಡುತ್ತಾ ಮಾಧ್ಯಮಗಳ ಜತೆ ಮಾತನಾಡಿ, ಈವರೆಗೆ 13 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಸರ್ಕಾರ ನಮಗೇನಾದರೂ ಸಹಾಯ ಮಾಡಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಬೆಳಗಾವಿಯ ಯಶ್ ಆಸ್ಪತ್ರೆಗೆ ಡಿಹೆಚ್‌ಒ ಡಾ. ಮಹೇಶ್ ಕೋಣಿ ಭೇಟಿ ನೀಡಿ ಮಗುವಿನ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಡಿಹೆಚ್‌ಒ ಡಾ.ಮಹೇಶ್ ಕೋಣಿ, ‘ಐದು ತಿಂಗಳ ಹಿಂದೆ ಮಗು ಚೆನ್ನಾಗಿಯೇ ಇತ್ತು. ಮಗುವಿಗೆ ಜ್ವರ ಕಾಣಿಸಿಕೊಂಡು ಮೂರ್ಛೆ ರೋಗ ಆರಂಭವಾಗಿದೆ. ಆಗಲೇ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದರೆ ಒಳ್ಳೆಯದಾಗುತ್ತಿತ್ತು. ಮಗುವಿನ ಸ್ಥಿತಿ ಚಿಂತಾಜನಕ ಇದೆ, ಮೆದುಳು ಜ್ವರ ಮಾದರಿಯಲ್ಲಿದೆ. ಸಿಟಿ ಸ್ಕ್ಯಾನ್ ಸೇರಿ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಔಟ್ ಆಫ್ ಡೇಂಜರ್ ಅನ್ನಕ್ಕಾಗಲ್ಲ, ಇನ್ನೂ ಸ್ಥಿತಿ ಚಿಂತಾಜನಕವಾಗಿದೆʼ ಎಂದಿದ್ದಾರೆ.
ʼಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗಲೂ ಮೂರ್ಛೆ ರೋಗ ಬಂದಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಿಡ್ನಿಗೆ ತೊಂದರೆಯಾಗಿ ಆರು ಬಾರಿ ಡಯಾಲಿಸಿಸ್ ಮಾಡಿದ್ದಾರೆ. ಈ ಹಿಂದೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಮಗುವಿಗೆ ಡಯಾಲಿಸಿಸ್ ಮಾಡಿದ ಮಾಹಿತಿ ಇದೆ. ಯಾವ ಕಾರಣಕ್ಕೆ ಡಯಾಲಿಸಿಸ್ ಮಾಡಿದ್ದಾರೆ ಎಂದು ಗೊತ್ತಾಗಿಲ್ಲ. ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ, ಹುಬ್ಬಳ್ಳಿಯಲ್ಲಿ ತಜ್ಞ ವೈದ್ಯರೇ ಆರೋಗ್ಯ ತಪಾಸಣೆ ಮಾಡಿದ್ದಾರೆ. ಆದರೆ ಚಿಕಿತ್ಸೆಗೆ ಮಗು ಸ್ಪಂದಿಸಿಲ್ಲ. ಯಶ್ ಆಸ್ಪತ್ರೆಯವರು ಮಗುವಿನ ಸಂಪೂರ್ಣ ಖರ್ಚುವೆಚ್ಚ ತಾವೇ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಮೆದುಳಿಗೆ ಹಾನಿ ಆಗಿರುವುದರಿಂದ ಪರಿವೀಕ್ಷಣೆಯಲ್ಲಿ ಇಡಬೇಕಾಗುತ್ತೆ. ನಾನು ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ’ ಎಂದು ಡಿಎಚ್‌ಒ ತಿಳಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮಗುವಿನ ಆರೋಗ್ಯ ಬಗ್ಗೆ ಡಿಎಚ್‌ಒ ಮಾಹಿತಿ ಪಡೆಯುತ್ತಿದ್ದಾರೆ. ಮಗುವಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಪ್ರಭಾಕರ್ ಕೋರೆ ಮನೆಗೆ ಪ್ರಕಾಶ್ ಹುಕ್ಕೇರಿ ಭೇಟಿ: ಬೆಳಗಾವಿ ರಾಜಕೀಯದಲ್ಲಿ ಗೊಂದಲ