ಕೊಪ್ಪಳ: ಜಗಳವಾಡುತ್ತಿದ್ದ ಬಿಡಾಡಿ ದನಗಳು (Cow Attack) ಮಹಿಳೆಯೊಬ್ಬರ ಮೇಲೆ ಎರಗಿ ಕೊಂಬಿನಿಂದ ಇರಿದ ಪರಿಣಾಮ ಸ್ಥಳದಲ್ಲಿಯೇ ರಕ್ತಸ್ರಾವದಿಂದ ಮೃತಪಟ್ಟ ಘಟನೆ ದೇವರಾಜ ಅರಸ್ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿತ್ತು. ರಮೀಜಾ ಬೇಗಂ ಹುಸೇನ್ ಸಾಬ್ (೪೫) ಮೃತ ದುರ್ದೈವಿ.
ದೇವರಾಜ ಅರಸ್ ಕಾಲೋನಿ ನಿವಾಸಿಯಾಗಿರುವ ರಮೀಜಾ ಬೇಗಂ, ಭಾನುವಾರ ರಾತ್ರಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಬೀದಿ ದನವೊಂದು ಇರಿದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ರಮೀಜಾ ಬೇಗಂರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಮೃತದೇಹವಿಟ್ಟು ಪ್ರತಿಭಟನೆ
ಬಿಡಾಡಿ ದನಗಳ ನಿಯಂತ್ರಿಸುವಂತೆ ಸಾಕಷ್ಟು ಬಾರಿ ನಾಗರಿಕರು ನಗರಸಭೆಗೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸೋಮವಾರ ಕೊಪ್ಪಳ ನಗರಸಭೆ ಕಚೇರಿ ಮುಂದೆ ಮಹಿಳೆಯ ಮೃತದೇಹ ಇಟ್ಟು ಸಾರ್ವಜನಿಕರು, ಕುಟುಂಬಸ್ಥರು ಪ್ರತಿಭಟಿಸಿದರು. ರಮೀಜಾ ಬೇಗ್ಂ ಸಾವಿಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ಕಡು ಬಡತನದ ಈ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪರಿಹಾರ ಘೋಷಣೆ ಮಾಡುವವರೆಗೂ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟುಹಿಡಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರು. ನಿಯಮಾನುಸಾರ ನಗರಸಭೆಯಿಂದ ಏನು ಪರಿಹಾರ ನೀಡಲು ಸಾಧ್ಯವೋ ಆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ ಬಳಿಕ ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದರು.
ಬಿಡಾಡಿ ದನಗಳ ಉಪಟಳ ಹೆಚ್ಚಾಗಿದ್ದು, ಬೀದಿಬದಿ ವ್ಯಾಪಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಇವುಗಳು ಹಲವಾರು ಬಾರಿ ದಾಳಿ ಮಡಿವೆ. ಇದರಿಂದ ಹಲವರಿಗೆ ಗಾಯಗಳಾಗಿವೆ. ಕೆಲವರ ಕೈ, ಕಾಲುಗಳು ಮುರಿತಕ್ಕೊಳಗಾಗಿವೆ. ಕೆಲವರ ವಾಹನಗಳು ಸಹ ಜಖಂ ಆಗಿವೆ. ಈ ಎಲ್ಲ ಜಾನುವಾರುಗಳನ್ನು ಗೋ ಶಾಲೆಗೆ ಬಿಡುವ ಮೂಲಕ ಜನರ ಹಾಗೂ ಜಾನುವಾರುಗಳ ಪ್ರಾಣ ಉಳಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ | Religious conversion | ಕ್ರೈಸ್ತರಾಗಿ ಮತಾಂತರಗೊಂಡಿದ್ದ 1,700 ಲಂಬಾಣಿ ಕುಟುಂಬ ಘರ್ ವಾಪ್ಸಿ