ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೆಗಡೆಕಟ್ಟಾ ಬಳಿಯ ರಸ್ತೆಯಲ್ಲಿ ಗೋವಿನ ತಲೆಯನ್ನು ದುಷ್ಕರ್ಮಿಗಳು ಬಿಸಾಡಿ ಹೋಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಬಕ್ರೀದ್ ಹಬ್ಬಕ್ಕಾಗಿ ಗೋವನ್ನು ಕಡಿದಿರುವ (Cow Slaughter) ಶಂಕೆ ವ್ಯಕ್ತವಾಗಿದ್ದು, ಗೋವಿನ ರುಂಡವನ್ನು ನಡು ರಸ್ತೆಯಲ್ಲಿ ಹಾಕಿ ಅನಾಗರಿಕವಾಗಿ ವರ್ತನೆ ಮಾಡಲಾಗಿದ್ದು, ಈ ಸಂಬಂಧ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಗೋವಿನ ತಲೆಯನ್ನು ರಸ್ತೆಯಲ್ಲಿ ಬಿಸಾಡಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೆಗಡೆಕಟ್ಟಾದಿಂದ ಕಾನಳ್ಳಿ ರಸ್ತೆಗೆ ತೆರಳುವ ಮಧ್ಯ ಇದು ಕಂಡುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಯೊಂದು ಮನೆಯನ್ನು ಪರಿಶೀಲಿಸಿದ್ದಾರೆ. ಆದರೆ, ಯಾವುದೇ ಮನೆಯಲ್ಲಿ ಗೋ ಮಾಂಸ ಪತ್ತೆಯಾಗಿಲ್ಲ ಎಂಬ ಪೊಲೀಸರ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಇನ್ನು ಗೋವಿನ ತಲೆಯನ್ನು ಸಮೀಪದ ಪೊದೆಯಲ್ಲಿ ಎಸೆಯಲಾಗಿದ್ದು, ಅದನ್ನು ನಾಯಿಗಳು ಕಚ್ಚಿಕೊಂಡು ರಸ್ತೆ ಮಧ್ಯೆ ಬಿಟ್ಟಿರಬಹುದೇ ಎಂದೂ ಶಂಕಿಸಲಾಗಿದೆ. ಆದರೆ, ಇದನ್ನು ಯಾರು ಮಾಡಿದ್ದಾರೆ ಎಂಬ ವಿಚಾರ ಮಾತ್ರ ಬೆಳಕಿಗೆ ಬಂದಿಲ್ಲ.
ಹಿಂದು ಜಾಗರಣಾ ವೇದಿಕೆ ಖಂಡನೆ
ಈ ಘಟನೆ ಬಗ್ಗೆ ಹಿಂದು ಜಾಗರಣಾ ವೇದಿಕೆಯ ಶಿರಸಿ ಘಟಕವು ಭಾರಿ ಆಕ್ರೋಶವನ್ನು ಹೊರಹಾಕಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಈ ಬಗ್ಗೆ ಸರ್ಕಾರಕ್ಕೆ ಮನವಿ ಪತ್ರ ಬರೆದು ಆಗ್ರಹಿಸಿದೆ.
ಮನವಿ ಪತ್ರದಲ್ಲೇನಿದೆ?
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಸಮೀಪದ ಒಳರಸ್ತೆಯೊಂದರಲ್ಲಿ ನಮ್ಮ ಎಲ್ಲ ಹಿಂದುಗಳಿಗೆ ಪವಿತ್ರವಾಗಿರುವ, ನಿತ್ಯ ಪೂಜಿಸುವ ಗೋವಿನ ತಲೆಯನ್ನು ಕಡಿದಿರುವುದು ಖಂಡನೀಯ. ಗೋವು ಸಮಸ್ತ ಹಿಂದುಗಳಿಗೆ ಪೂಜನೀಯವಾಗಿದ್ದು, ಮುಕ್ಕೋಟಿ ದೇವರ ಸ್ವರೂಪವಾಗಿ ನಾವು ಗೋವನ್ನು ಪೂಜಿಸುತ್ತೇವೆ ಮತ್ತು ಆದರದಿಂದ ಕಾಣುತ್ತೇವೆ. ದುಷ್ಕರ್ಮಿಗಳು, ಸಮಾಜ ಘಾತುಕರು ಹಿಂದುಗಳ ಪವಿತ್ರ ಗೋವನ್ನು ವಧಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದಲ್ಲಿದ್ದಾರೆ. ಗೋವು ನಮ್ಮ ಹಿಂದುಗಳ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಹೀಗಿರುವಾಗ ನಮ್ಮ ಹಿಂದು ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಾರಣದಿಂದಲೇ ದುರುದ್ದೇಶಪೂರಿತವಾಗಿ ಗೋವನ್ನು ಕಡಿಯುವ ಹೀನ ಮನಸ್ಸಿನ ದುರುಳರ ದುಷ್ಕೃತ್ಯವನ್ನು ಸಹಿಸಲಸಾಧ್ಯ.
ಈ ಕೂಡಲೇ ಪೋಲೀಸ್ ಇಲಾಖೆ ತೀವ್ರತರವಾಗಿ ಅಗತ್ಯ ಕ್ರಮ ವಹಿಸಿ, ಈ ದುಷ್ಕೃತ್ಯದಲ್ಲಿ ಭಾಗಿಯಾದ ಆಪರಾಧಿಗಳನ್ನು ಬಂಧಿಸಬೇಕು. ಮತ್ತು ಮುಂದೆ ಎಲ್ಲಿಯೂ ಇಂತಹ ದುರ್ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಇಲ್ಲವಾದಲ್ಲಿ ಸಮಸ್ತ ಹಿಂದು ಸಮಾಜವು ಒಟ್ಟಾಗಿ ಗೋ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪರ್ಯಾಯ ಕ್ರಮವನ್ನು ಆಲೋಚಿಸುವ ಅನಿವಾರ್ಯತೆ ಎದ್ದು ಕಾಣುತ್ತದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರಗಳು ಇಂತಹ ಸಮಾಜ ಘಾತುಕ ದುಷ್ಟಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಸಮಸ್ತ ಹಿಂದು ಸಮಾಜದ ಸಂಘಟನೆಗಳ ಪರವಾಗಿ ಹಿಂದು ಜಾಗರಣಾ ವೇದಿಕೆ ಶಿರಸಿ ಘಟಕವು ಈ ಆಗ್ರಹಪೂರ್ವಕ ಮನವಿಯನ್ನು ಸಲ್ಲಿಸುತ್ತಿದೆ.