Site icon Vistara News

Crematorium Problem : ಕಳೆದ ವರ್ಷ ರಸ್ತೆ ಬದಿ ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು!

Officials exhume body buried on roadside

ತುಮಕೂರು: ಸ್ಮಶಾನಕ್ಕೆ ಜಾಗವಿಲ್ಲದೆ ರಸ್ತೆ ಬದಿಯೇ ಅಂತ್ಯ ಸಂಸ್ಕಾರ ಮಾಡಿದ್ದ ಪ್ರಕರಣಕ್ಕೆ (Crematorium Problem) ಸಂಬಂಧಿಸಿದಂತೆ ಶುಕ್ರವಾರ ಬೆಳ್ಳಂಬೆಳಗ್ಗೆ ಹೂತಿದ್ದ ಶವವನ್ನು ಹೊರತೆಗೆದಿರುವ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ. ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಡಿ.26ರಂದು ಗ್ರಾಮದ ತಿಮ್ಮರಾಜುರವರ ತಂದೆ ಪೆದ್ದಯ್ಯ ಎಂಬುವವರು ಮೃತಪಟ್ಟಿದ್ದರು.

ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ಪೆದ್ದಯ್ಯ ಅವರ ಶವದ ಅಂತ್ಯ ಸಂಸ್ಕಾರ ನಡೆಸಲು ಭಾರಿ ಕಷ್ಟ ಎದುರಿಸಿದರು. ಅವರಿಗೆ ಸ್ವಂತ ಜಮೀನು ಇಲ್ಲ. ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕ ಸ್ಮಶಾನವಿಲ್ಲ. ಹೀಗಾಗಿ ಏನು ಮಾಡುವುದು ಎಂದು ತಿಳಿಯದೆ ರಸ್ತೆ ಬದಿಯೇ ಮಣ್ಣು ಅಗೆದು ಅಂತ್ಯ ಸಂಸ್ಕಾರ ನಡೆಸಿದ್ದರು. ತಿಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿ ಮೃತರ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಪ್ರತಿಭಟನೆಯನ್ನೂ ನಡೆಸಿದ್ದರು.

ಇದೀಗ ತುಮಕೂರು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶಟ್ಟಿ ಆದೇಶದ ಮೇರೆಗೆ ದುರ್ಗದಳ್ಳಿ ಸರ್ವೆ ನಂ 2/2 ರಲ್ಲಿ ನೀಡಿದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಉಪದ್ರವಗಳ ನಿವಾರಣೆ ಆದೇಶದನ್ವಯ ಮೃತದೇಹವನ್ನು ಹೊರತೆಗೆದು ಸ್ಥಳಾಂತರ ಮಾಡಲಾಗಿದೆ. ಪುತ್ರ ತಿಮ್ಮರಾಜು ಗಮನಕ್ಕೂ ತರದೇ ಏಕಾಏಕಿ ಶವ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಕಂಡುಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಸ್ಮಶಾನದ್ದು (Crematorium Problem). ಸಾರ್ವಜನಿಕ ರುದ್ರಭೂಮಿ ಇಲ್ಲದೆ, ಅಥವಾ ನಿಗದಿತ ರುದ್ರಭೂಮಿಗೆ ಕಾನೂನು ತಕರಾರುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವಾರು ಬಾರಿ ಜನರು ಕಳೇಬರವನ್ನು (Dead Body) ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆಗಳು ನಡೆದಿದೆ. ಅದರ ಮುಂದುವರಿದ ಭಾಗವಾಗಿ ತುಮಕೂರಿನಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಹಿನ್ನೆಲೆಯಲ್ಲಿ ಜನರು ಸಿಟ್ಟಿಗೆದ್ದು ಮಾರ್ಗದ ಬದಿಯೇ ಅಂತ್ಯ ಸಂಸ್ಕಾರ (Cremation near Road) ಮಾಡಿದ್ದರು.

ದುರ್ಗದಹಳ್ಳಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಜಮೀನು ಮಂಜೂರು ಮಾಡಲು ಅಧಿಕಾರಿಗಳು ವಿಫಲವಾಗಿದ್ದರು. ಹೀಗಾಗಿ ಸಾರ್ವಜನಿಕರ ಸಹಕಾರದಿಂದಲೇ ತಿಮ್ಮರಾಜು ಅವರು ರಸ್ತೆ ಬದಿಯೇ ಅಂತ್ಯ ಸಂಸ್ಕಾರ ನಡೆಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version