Site icon Vistara News

Crime news | ಗಾಂಜಾ ಮತ್ತಿನಲ್ಲಿದ್ದ ಕಿರಾತಕರಿಂದ ಪೊಲೀಸ್‌ ಮೇಲೆ ಮಾರಣಾಂತಿಕ ಹಲ್ಲೆ

assault

ಆನೇಕಲ್: ಗಾಂಜಾ ಮತ್ತಿನಲ್ಲಿದ್ದ ಕಿರಾತಕರ ಗ್ಯಾಂಗ್ ಪೋಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ಪಟ್ಟಣದ ದಿನ್ನೂರಿನ ನೀಲಗಿರಿ ತೋಪಿನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನಲ್ಲಿ ರೌಡಿಶೀಟರ್ ವರುಣ್ ಅಲಿಯಾಸ್ ಕೆಂಚ ಎಂಬಾತ ಹಾಗೂ ಆತನ ಸಹಚರರು ಈ ಕೃತ್ಯ ನಡೆಸಿದ್ದಾರೆ. ಈ ಗ್ಯಾಂಗ್ ಗಾಂಜಾ ಸೇವಿಸಿ ರಾಘವೇಂದ್ರ ಸರ್ಕಲ್‌ನಲ್ಲಿ‌ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರುತ್ತಿತ್ತು. ಆಗ ಬೈಕ್ ರಸ್ತೆಬದಿ ಹಾಕಿ ಎಂದು ಪೊಲೀಸ್ ಸಿಬ್ಬಂದಿ ರಂಗನಾಥ್ ಅವರು ಬುದ್ಧಿವಾದ ಹೇಳಿದ್ದರು. ಈ ವೇಳೆ ಗಾಂಜಾ ಗ್ಯಾಂಗ್ ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು. ನಂತರ ದಿನ್ನೂರು ಕಡೆ ಎಸ್ಕೇಪ್ ಆಗಿತ್ತು.

ನಿಂದಿಸಿದ ಗೂಂಡಾಗಳನ್ನು ಬೈಕಿನಲ್ಲಿ ರಂಗನಾಥ್ ಹಿಂಬಾಲಿಸಿದ್ದು, ದಿನ್ನೂರಿನ ನೀಲಗಿರಿ ತೋಪಿನಲ್ಲಿ ಅವರನ್ನು ಸುತ್ತುವರಿದು ಗುಂಪು ಮಾರಣಾಂತಿಕ ಹಲ್ಲೆ ನಡೆಸಿತು. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ರಂಗನಾಥ್‌ ಗಂಭೀರವಾಗಿ ಗಾಯಗೊಂಡಿದ್ದು, ಪೋನ್ ಮಾಡಿ ಠಾಣೆಯಲ್ಲಿದ್ದ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಈಗಾಗಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವರುಣ್‌ನ ಗ್ಯಾಂಗ್ ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದೆ. ವರುಣ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಮೇಲೆಯೇ ಹೀಗೆ ಹಲ್ಲೆ ನಡೆಸಿದರೆ ಸಾಮಾನ್ಯ ಜನರ ಪಾಡೇನು ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಹಾಕಿದ್ದಾರೆ.

ಇದನ್ನೂ ಓದಿ | Assault on woman | ರಸ್ತೆ ಮೇಲೆ ಹಾಕಿದ್ದ ಅಡಕೆ ಸಿಪ್ಪೆ ತೆಗೆದಿಲ್ಲ ಎಂದು ಜಗಳ ತೆಗೆದು ಮಹಿಳೆಯ ಮೇಲೆ ಹಲ್ಲೆ

Exit mobile version