ಬೆಂಗಳೂರು: ರಾಜ್ಯದಲ್ಲಿ ರೌಡಿ ಪಾಲಿಟಿಕ್ಸ್ (Criminal politics) ಚರ್ಚೆ ಜೋರಾಗಿ ನಡೆಯುತ್ತಿರುವ ನಡುವೆಯೇ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರೊಂದಿಗೆ ಇಬ್ಬರು ರೌಡಿಗಳಿರುವ ಚಿತ್ರವೊಂದು ವೈರಲ್ ಆಗಿದೆ. ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ರೌಡಿಸಂ ಹಿನ್ನೆಲೆಯಿರುವ ಫೈಟರ್ ರವಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮತ್ತು ಅದನ್ನು ಸಮರ್ಥಿಸಲು ಹೋಗಿ ಅಶ್ವತ್ಥ ನಾರಾಯಣ ಅವರು ಚರ್ಚೆಗೆ ಒಳಗಾಗಿದ್ದಾರೆ. ಈಗ ರೌಡಿಗಳ ಜತೆಗಿನ ಫೋಟೊ ಸುದ್ದಿ ಮಾಡಿದೆ.
ಈಗ ಅಶ್ವತ್ಥನಾರಾಯಣ ಅವರು ಕಾಣಿಸಿಕೊಂಡಿರುವುದು ರೌಡಿಗಳಾದ ಮಾರ್ಕೆಟ್ ವೇಡಿ, ಒಂಟೆ ರೋಹಿತ್. ಚಿತ್ರದಲ್ಲಿ ಸಚಿವರು ವೇದಿಕೆ ಹಂಚಿಕೊಂಡಿರುವುದು ಮಾತ್ರವಲ್ಲ, ಆತ್ಮೀಯವಾಗಿ ಮಾತನಾಡುತ್ತಿರುವ ಚಿತ್ರವೂ ಇದೆ.
ಇದಕ್ಕೆ ಅಶ್ವತ್ಥನಾರಾಯಣ ಹೇಳುವುದೇನು?
ಈ ಫೋಟೊ ವಿವಾದಕ್ಕೆ ಸಂಬಂಧಿಸಿ ಸಚಿವ ಅಶ್ವಥ್ ನಾರಾಯಣ ಸ್ಪಷ್ಟೀಕರಣ ನೀಡಿದ್ದಾರೆ.
ʻʻನಮ್ಮ ಪ್ರತಿ ಪಕ್ಷದವರಿಗೆ ವಿಚಾರದ ಕೊರತೆ ಆಗಿದೆ. ಅವರು ದಿವಾಳಿ ಆಗಿದ್ದಾರೆ. ಕಾಂಗ್ರೆಸ್ ರೌಡಿಗಳ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರಲ್ಲಿ ಕೆಲವರು ಆ ಹಿನ್ನೆಲೆಯಲ್ಲಿ ಇರುವವರೇ. ಅಂಥ ಹಿನ್ನೆಲೆಯಿರುವ ನಾಯಕರು ಯಾವ ಬಾಯಲ್ಲಿ ಮಾತಾಡ್ತಿದ್ದಾರೋ ಗೊತ್ತಿಲ್ಲʼʼ ಎಂದು ಹೇಳಿದರು.
ಬಿಜೆಪಿಯ ಕೆಲವು ನಾಯಕರ ಮೇಲೂ ಕೇಸ್ ಇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ʻʻಧರ್ಮಕ್ಕಾಗಿ, ನಾಡಿಗಾಗಿ, ಸಂಸ್ಕೃತಿ, ಆಚಾರ, ವಿಚಾರಕ್ಕಾಗಿ ಹೋರಾಟ ಮಾಡಿದವರ ಮೇಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಲ್ಲ ಸಲ್ಲದ ಕೇಸ್ ಗಳನ್ನು ಹಾಕಿದ್ದಾರೆʼʼ ಎಂದರು.
ʻʻಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಗಮನಿಸಿದರೆ ಆ ಪಕ್ಷದ ಸಂಸ್ಕೃತಿಯೇ ಗೂಂಡಾ ಸಂಸ್ಕೃತಿ. ಆದರೆ, ನಮ್ಮ ಪಕ್ಷದಲ್ಲಿ ಆಚಾರ, ವಿಚಾರ, ಬದ್ಧತೆ, ಸಮಾಜದ ಪರವಾಗಿ ಇದೆʼʼ ಎಂದು ಹೇಳಿದರು ಅಶ್ವತ್ಥನಾರಾಯಣ. ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದ ನೇಪಥ್ಯದಲ್ಲಿ ಅಶ್ವಥ್ ನಾರಾಯಣ್ ಈ ಹೇಳಿಕೆ ನೀಡಿದರು.
ಸಮರ್ಥನೆ ಮಾಡಿಕೊಂಡ ಆರಗ ಜ್ಞಾನೇಂದ್ರ
ಈ ನಡುವೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರೌಡಿಗಳ ಜತೆಗಿನ ಫೋಟೊವನ್ನು ಸಮರ್ಥಿಸಿಕೊಂಡಿದ್ದಾರೆ. ʻʻಯಾರೋ ಬಂದು ಫೋಟೊ ಬಂದ ತಗೊತೀವಿ ಅಂತಾರೆ. ರಾಜಕಾರಣಗಳು ಬೇಡ ಅನ್ನಕ್ಕೆ ಆಗಲ್ಲ ಅಂತ ಹೇಳೊಕಾಗುತ್ತಾʼʼ ಎಂದು ಹೇಳಿದ್ದಾರೆ.
ಸೈಲೆಂಟ್ ಸುನಿಲ್ ಜತೆ ಇಮ್ರಾನ್ ಪಾಷಾ ಫೋಟೊ
ಈ ನಡುವೆ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ಸೈಲೆಂಟ್ ಸುನಿಲ್‌ನ ಜತೆ ಕಾಂಗ್ರೆಸ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಇರುವ ಚಿತ್ರವೊಂದು ಸದ್ದು ಮಾಡಿದೆ. ಇದರೊಂದಿಗೆ ಸೈಲೆಂಟ್ ಸುನಿಲ್‌ಗೆ ಬಿಜೆಪಿ ನಾಯಕರ ಜತೆ ಮಾತ್ರವಲ್ಲ, ಕಾಂಗ್ರೆಸ್ ನಾಯಕರ ಜತೆಗೂ ಸಂಬಂಧವಿದೆ ಎಂದು ಈ ಫೋಟೊ ಸಾರಿ ಹೇಳಿದೆ!
ಈ ಫೋಟೊ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಪೊರೇಟರ್ ಇಮ್ರಾನ್ ಪಾಷಾ, ಅದು ಹಳೆ ಫೋಟೊ, ಇತ್ತೀಚೆಗೆ ತೆಗೆದಿದ್ದಲ್ಲ. ಈಗ ಅದನ್ನು ವೈರಲ್ ಮಾಡ್ತಿದ್ದಾರೆ. ನಮಗೆ ಆಗದವರು ವೈರಲ್ ಮಾಡ್ತಿದ್ದಾರೆ. ನಾವು ಮಾಡೋ ಒಳ್ಳೆ ಕೆಲಸ ನೋಡಿ ಅವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಹೀಗಾಗಿ ಈಗ ಫೋಟೊವನ್ನು ವೈರಲ್ ಮಾಡಿದ್ದಾರೆ ಎಂದಿದ್ದಾರೆ.