ರಾಯಚೂರು: ಇಲ್ಲಿನ ಕುರವಕಲಾ ಗ್ರಾಮದಲ್ಲೊಂದು ಭಯಾನಕ ಘಟನೆ ನಡೆದಿದೆ. ಕುಡಿಯುವ ನೀರು ತರಲು ಕೃಷ್ಣಾ ನದಿಗೆ ಹೋಗಿದ್ದ 9 ವರ್ಷದ ಬಾಲಕನನ್ನು ಮೊಸಳೆ ಹೊತ್ತೊಯ್ದಿದೆ (Crocodile Attack). ಹುಡುಗನ ಹೆಸರು ನವೀನ್ ಎಂದಾಗಿದ್ದು, ಪಾಲಕರ ಜತೆ ಜಮೀನಿಗೆ ಹೋಗಿದ್ದ. ಜಮೀನಿನ ಪಕ್ಕದಲ್ಲೇ ನದಿ ಇದ್ದಿದ್ದರಿಂದ ಕುಡಿಯುವ ನೀರು ತರಲೆಂದು ಬಾಲಕನನ್ನು ಪಾಲಕರೇ ಕಳಿಸಿದ್ದರು. ನವೀನ್ ನದಿ ಬಳಿ ಕುಳಿತುಕೊಂಡು ಬಾಟಲಿಗೆ ನೀರು ತುಂಬಿಸುತ್ತಿದ್ದಾಗ ಮೊಸಳೆ ಆಕ್ರಮಣ ಮಾಡಿದೆ. ಆತನನ್ನು ಹೊತ್ತೊಯ್ದಿದೆ.
ಬಾಲಕ ನವೀನ್ ಬದುಕಿರುವ ಸಾಧ್ಯತೆ ತೀರ ಕಡಿಮೆ ಇದ್ದರೂ, ಅವನಿಗಾಗಿ ನದಿಯಲ್ಲಿ ಶೋಧಕಾರ್ಯ ಪ್ರಾರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಸ್ಥಳೀಯರು ಅನೇಕರು ಬಾಲಕನ ಪತ್ತೆಗಾಗಿ ಹುಡುಕುತ್ತಿದ್ದಾರೆ. ನದಿಯಲ್ಲಿ ಮೊಸಳೆ ಇರುವ ಭಯದಿಂದ ನೇರವಾಗಿ ನದಿಗೆ ಧುಮುಕುವುದು ಕಷ್ಟವಾಗಿದೆ. ಪಾಲಕರು ಆಕ್ರಂದಿಸುತ್ತಿದ್ದಾರೆ. ಚಂದ್ರಬಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Koppala News: ಸಿಹಿ ತಿನಿಸಿನ ಗಾಜಿನ ಬಾಟಲಿ ಗಂಟಲಿನಲ್ಲಿ ಸಿಲುಕಿ ಬಾಲಕ ಸಾವು
ಕೃಷ್ಣಾನದಿಯಲ್ಲಿ ಹೀಗೆ ಬಾಲಕನ ಮೇಲೆ ಮೊಸಳೆ ದಾಳಿ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಫೆಬ್ರವರಿಯಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಕೊರ್ತಕುಂದ ಗ್ರಾಮದಲ್ಲಿ 9 ವರ್ಷದ ಬಾಲಕ ಪವನ್ ಮೇಲೆ ಮೊಸಳೆ ದಾಳಿ ಮಾಡಿತ್ತು. ಆದರೆ ಅವನು ಸ್ಥಳೀಯರ ಸಮಯಪ್ರಜ್ಞೆಯಿಂದ ಪಾರಾಗಿದ್ದ. ಗ್ರಾಮದ ತಿಮ್ಮಪ್ಪ ಜಾತ್ರೆ ನಿಮಿತ್ತ ಅಜ್ಜಿ ಮನೆಗೆ ಪವನ್ ಬಂದಿದ್ದ. ಈ ವೇಳೆ ಕುಟುಂಬಸ್ಥರೊಂದಿಗೆ ಪವನ್ ನದಿಗೆ ತೆರಳಿದ್ದ. ಪಾಲಕರು ನದಿಯಲ್ಲಿ ಕಾಲು ತೊಳೆದುಕೊಳ್ಳುತ್ತಿದ್ದರೆ, ಈತ ಆಟವಾಡುತ್ತ ಸ್ವಲ್ಪ ಮುಂದೆ ಹೋಗಿದ್ದ. ಆಗ ಅವನ ಮೇಲೆ ಎರಡು ಮೊಸಳೆಗಳು ದಾಳಿ ನಡೆಸಿದ್ದವು. ಆದರೆ ಅಂದು ನದಿ ಬಳಿ ಅನೇಕರು ಇದ್ದುದರಿಂದ ಪವನ್ನನ್ನು ಎಲ್ಲ ಸೇರಿ ಪಾರು ಮಾಡಿದ್ದರು. ಹಾಗಿದ್ದಾಗ್ಯೂ ಪವನ್ಗೆ ಗಾಯಗಳಾಗಿದ್ದವು.