ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ, ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಹಾಡುಗಳ ಖ್ಯಾತಿಯ ತೆಲುಗು ಗಾಯಕಿ ಮಂಗ್ಲಿ ರಾಜಧಾನಿಗೆ ಬರಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಹಿನ್ನೆಲೆಯಲ್ಲಿ ನಗರದಲ್ಲಿ ಆ.೧೪ರಂದು ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ದೇಶಭಕ್ತಿ ಹಾಡುಗಳ ಮೂಲಕ ಸಿನಿ ರಸಿಕರನ್ನು ರಂಜಿಸಲಿದ್ದಾರೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು, ಹರ್ ಘರ್ ತಿರಂಗಾ ಅಬಿಯಾನದ ಭಾಗವಾಗಿ ನಗರದ ಮಲ್ಲೇಶ್ವರಂ 18ನೇ ಅಡ್ಡರಸ್ತೆಯ ಸರ್ಕಾರಿ ಕಾಲೇಜು ಮೈದಾನದಲ್ಲಿ ಆ.14ರಂದು ರಾತ್ರಿ 8.30ಕ್ಕೆ ವೈಭವೋಪೇತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಖ್ಯಾತ ಗಾಯಕಿ ಮಂಗ್ಲಿ(ಸತ್ಯವತಿ) ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ರಾತ್ರಿ 12ಗಂಟೆಗೆ ಧ್ವಜಾರೋಹಣ ಜತೆಗೆ 45 ನಿಮಿಷಗಳ ವಿಶೇಷ ಪಟಾಕಿ ಮತ್ತು ಸಿಡಿಮದ್ದು ಪ್ರದರ್ಶನ ಏರ್ಪಡಿಸಿದ್ದು, ಇದರಲ್ಲಿ ಪ್ರಧಾನಿ ಮೋದಿ ಸೇರಿ ನವಭಾರತದ ನಾಯಕರ ಚಿತ್ತಾರಗಳು ಮೂಡಿಬರಲಿವೆ. ಜತೆಗೆ ಸಮನ್ವಯ ನೃತ್ಯ ತಂಡ, ಆಯನ ಡ್ಯಾನ್ಸ್ ಕಂಪನಿ, ಶ್ರದ್ಧಾ ಡ್ಯಾನ್ಸ್ ಎನ್ಸೆಂಬಲ್, ನಾದಂ, ಸಾಯಿ ಆರ್ಟ್ ಇಂಟರ್ ನ್ಯಾಷನಲ್, ನಾಟ್ಯ ಸ್ಟೆಮ್ ಡ್ಯಾನ್ಸ್ ಕಂಪನಿ ಮತ್ತು ಅಯ್ಯಂಗಾರ್ ಸೆಂಟರ್ ಫಾರ್ ಫೈನ್ ಆರ್ಟ್ಸ್ ಸಂಸ್ಥೆಗಳು ಹೆಸರಾಂತ ನೃತ್ಯಗುರು ಡಾ.ವೀಣಾ ಮೂರ್ತಿ ವಿಜಯ್ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ | Amrit Mahotsav | ಮಾ ತುಜೇ ಸಲಾಂ; ಮೂರು ವರ್ಷದ ಕಂದನ ದೇಶ ಭಕ್ತಿ ಗಾಯನ