ಕಾರವಾರ : ಜಿಲ್ಲೆಯ ಭಟ್ಕಳದ ಪುರಸಭೆಗೆ ಅಳವಡಿಸಲಾಗಿದ್ದ ಉರ್ದು ನಾಮಫಲಕ ತೆರವುಗೊಳಿಸಿದ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪುರಸಭೆಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಡಾ.ಬಿ.ಇ.ಸುಮಂತ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಸೂಚನೆ ಮೇರೆಗೆ ಪುರಸಭೆಯ 500 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ನಿಷೇಧಾಜ್ಞೆ ಜಾರಿಯಿರುವ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಸೇರದಂತೆ ಸೂಚನೆ ನೀಡಲಾಗಿದೆ. ಈ ನಿಷೇಧಾಜ್ಞೆ ಜುಲೈ 2ರ ಮಧ್ಯರಾತ್ರಿ 12ರ ವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಜೂನ್ 27 ರಂದು ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಸ್ಲಿಂ ಮುಖಂಡರು ಪುರಸಭಾ ಕಾರ್ಯಾಲಯಕ್ಕೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಇರುವ ನಾಮಫಲಕ ಅಳವಡಿಕೆಗೆ ಮುಂದಾಗಿದ್ದರು. ಈ ವೇಳೆ ಪುರಸಭೆಗೆ ಆಗಮಿಸಿದ ಹಿಂದೂ ಕಾರ್ಯಕರ್ತರು ಉರ್ದು ಭಾಷೆಯಲ್ಲಿ ನಾಮಫಲಕ ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಎರಡು ಕೋಮುಗಳ ನಡುವೆ ಮಾತಿನ ಚಕಮಕಿಗೂ ಕಾರಣವಾಗಿತ್ತು. ಹಿಂದೂ ಕಾರ್ಯಕರ್ತರು ಭಟ್ಕಳ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿರುವುದನ್ನು ಕೂಡಲೇ ತೆರವುಗೊಳಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಹ ನೀಡಿದ್ದರು.
ಇನ್ನೊಂದೆಡೆ ಉರ್ದು ಭಾಷೆಯಲ್ಲಿ ಹಾಕಿದ ನಾಮಫಲಕವನ್ನು ತೆರವುಗೊಳಿಸುವಂತೆ ಕನ್ನಡಪರ ಸಂಘಟನೆಗಳು ನೀಡಿದ್ದ ಮನವಿಗೆ ಪ್ರತಿಯಾಗಿ ಭಟ್ಕಳದ ಮುಸ್ಲಿಂ ಸಮುದಾಯ, ಉರ್ದು ಭಾಷೆಯಲ್ಲಿ ಹಾಕಿದ ನಾಮಫಲಕವನ್ನು ತೆರವು ಮಾಡದಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮನವಿ ನೀಡಿತ್ತು. ಹೀಗಾಗಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ | Weather Report | ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಈಗಾಗಲೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್, ಭಟ್ಕಳ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಶಾಂತಿ ಸಭೆ ನಡೆಸಿದ್ದರು. ಸಭೆಯಲ್ಲಿ, ಪುರಸಭೆಗೆ ಬೇರೆ ಭಾಷೆಯ ನಾಮಫಲಕ ಅಳವಡಿಕೆಗೆ ಅನುಮತಿ ಇಲ್ಲವಾಗಿದ್ದು ಉರ್ದು ಬೋರ್ಡ್ ಅನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಜಿಲ್ಲಾಧಿಕಾರಿ ಸೂಚನೆ ಹಿನ್ನಲೆ ಅನುಮತಿ ಇಲ್ಲದೇ ಪುರಸಭೆಗೆ ಅಳವಡಿಸಲಾಗಿದ್ದ ನಾಮಫಲಕವನ್ನು ಜೂನ್ 30 ರಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಗಿತ್ತು.
ಇದಾದ ಬಳಿಕ ಮುಸ್ಲಿಂ ಸಮುದಾಯದವರು ಸಭೆ ಸೇರಿ ಸರ್ಕಾರದ ಅನುಮತಿ ಪಡೆದು ಉರ್ದು ಬೋರ್ಡ್ ಅಳವಡಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಹೋರಾಟ ಕೈಗೆತ್ತಿಕೊಳ್ಳುವ ತೀರ್ಮಾನ ಪ್ರಕಟಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಿಂದಾಗಿ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಭಟ್ಕಳವು ಮತೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಸಣ್ಣ ಘಟನೆ ನಡೆದರೂ ಸಹ ಕೋಮು ಗಲಭೆ ಆಗುವ ಸಾಧ್ಯತೆ ಇರುತ್ತದೆ.
ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪುರಸಭೆ ಕಟ್ಟಡದ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ, 144 ರನ್ವಯ ನಿಷೇದಾಜ್ಞೆ ಜಾರಿ ಮಾಡುವಂತೆ ಭಟ್ಕಳ ಶಹರ ಠಾಣೆ ಪೊಲೀಸ್ ನಿರೀಕ್ಷಕರು ಕೇಳಿಕೊಂಡ ಹಿನ್ನಲೆ, ತಹಸೀಲ್ದಾರ್ ಡಾ. ಸುಮಂತ್.ಬಿ.ಇ ಜುಲೈ 2ರ ಮದ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ | Weather Report: ರಾಜ್ಯದಲ್ಲಿ ಇನ್ನೆರಡು ದಿನ ಅಬ್ಬರಿಸಲಿರುವ ಮಳೆರಾಯ