ಉಡುಪಿ: ಉಚ್ಚಿಲದಲ್ಲಿ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಅದರೊಳಗಿದ್ದ ಎಲ್ಲ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಉಚ್ಚಿಲದ ನಿವಾಸಿ ವಿಮಲಾ ಸಿ ಪುತ್ರನ್ ಅವರಿಗೆ ಸೇರಿದ ದೋಣಿ ಇದಾಗಿದ್ದು, ಸೋಮವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದಲ್ಲಿ (Cyclone Mandous) ಮುಳುಗಿದೆ. ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಉಚ್ಚಿಲದ ಗಿರಿಜಾ ದೋಣಿಯಲ್ಲಿ 7 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಸಮುದ್ರದಲ್ಲಿ ಅಲೆಗಳು ಉಬ್ಬರವೂ ಏರಿದೆ. ಇದರಿಂದ ನಿಯಂತ್ರಣಕ್ಕೆ ಸಿಗದ ದೋಣಿಯು ಸಮುದ್ರದಲ್ಲಿ ಮುಳುಗಿದೆ. ಮೀನುಗಾರಿಕೆ ನಡೆಸುತಿದ್ದ ದೋಣಿಗಳಲ್ಲಿ 7 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ದೋಣಿಯಲ್ಲಿದ್ದ ಬಲೆ ಹಾಗೂ ಹೈ ಸ್ಪೀಡ್ ಇಂಜಿನ್ ಸಮುದ್ರ ಪಾಲಾಗಿದ್ದು, ದೋಣಿಗೆ ಹಾನಿ ಉಂಟಾಗಿದೆ. ಘಟನೆಯಲ್ಲಿ ಸುಮಾರು ಆರೂವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಾಲೀಕರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಮಾಂಡೌಸ್ ಚಂಡಮಾರುತದಿಂದಾಗಿ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-45 ಕಿ.ಮೀ ಇರಲಿದ್ದು, 55 ಕಿ.ಮೀ ವರೆಗೂ ತಲುಪುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆ ಮೀನುಗಾರಿಕೆಗೆ ಇಳಿಯದಂತೆ ಎಚ್ಚರಿಕೆಯನ್ನು ನೀಡಿತ್ತು. ಎಚ್ಚರಿಕೆ ನೀಡಿದರೂ ಮೀನುಗಾರರು ಸಮುದ್ರಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Cyclone in Andaman Sea | ಮಾಂಡೌಸ್ ಮುಗಿಯುವ ಮುನ್ನವೇ ಮತ್ತೊಂದು ಚಂಡಮಾರುತಕ್ಕೆ ಸಿದ್ಧರಾಗಿ!