ಕೋಲಾರ: ಇಲ್ಲಿನ ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಾಗುತ್ತಿದ್ದು (Cyclone Mandous), ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದಿದೆ. ಆದರೆ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಿನವಿಡೀ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಸುಗುಣಮ್ಮ ಮತ್ತು ಅಮರೇಶ್ ಎಂಬುವರ ಮನೆಯ ಚಾವಣಿ ಕುಸಿದು ಬಿದ್ದಿದೆ. ಚಾವಣಿ ಕುಸಿಯುವಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ. ಸ್ಥಳಕ್ಕೆ ಪುರಸಭೆಯ ಆರೋಗ್ಯ ಅಧಿಕಾರಿ ಗೋವಿಂದರಾಜು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇತ್ತ ತುಮಟಗೆರೆಯಲ್ಲಿ ಸತತ ಮಳೆಗೆ ಮನೆಯ ಗೋಡೆ ಕುಸಿದಿದೆ. ಕಾಮಸಮುದ್ರ ಹೋಬಳಿ ಪುರ ಗ್ರಾಮದ ಗೋಪಣ್ಣ ಎಂಬುವವರ ಮನೆಯ ಗೋಡೆ ಕುಸಿದು, ಚಾವಣಿಯು ಭಾಗಶಃ ಕುಸಿದಿದೆ. ರಾತ್ರಿಯಿಡೀ ಸುರಿದ ಮಳೆ ಭಾನುವಾರ ಬೆಳಗ್ಗೆವರೆಗೂ ಸುರಿದ ಪರಿಣಾಮ ಮಣ್ಣಿನ ಗೋಡೆ ನೆನೆದು ಈ ಅನಾಹುತ ಸಂಭವಿಸಿದೆ.
ನೀರುಪಾಲಾದ ಭತ್ತದ ರಾಶಿ, ರೈತರು ಕಂಗಾಲು
ಕೋಲಾರದಲ್ಲಿ ಮನೆ ಹಾನಿಯಾದರೆ ಇತ್ತ ರಾಯಚೂರು ಜಿಲ್ಲೆಯಲ್ಲಿ ಬೆಳೆ ಹಾನಿ ಆಗಿದ್ದು, ರೈತರು ಕಂಗಾಲಾಗಿದ್ದಾರೆ. ಮಾಂಡೌಸ್ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಮಳೆಯಾಗುತ್ತಿದ್ದು, ಹೊಲದಲ್ಲಿ ರಾಶಿ ಹಾಕಿದ್ದ ಭತ್ತ ನೀರುಪಾಲಾಗಿದೆ.
120 ಎಕರೆಯಲ್ಲಿ ಬೆಳೆಯಲಾಗಿದ್ದ ಸುಮಾರು 3,600 ಚೀಲ ಭತ್ತದ ರಾಶಿಯನ್ನು ಮಾರಾಟಕ್ಕೂ ಮುನ್ನ ಒಣಗಿಸಲು ರೈತರು ರಾಶಿ ಹಾಕಿದ್ದರು. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಸುಮಾರು 50 ಲಕ್ಷ ರೂ ಮೌಲ್ಯದ ಭತ್ತ ಹಾಳಾಗಿದೆ. ಹಾನಿಯಾದ ಭತ್ತದ ರಕ್ಷಣೆ ಮಾಡಲು ರೈತರು ಪರದಾಡುತ್ತಿದ್ದಾರೆ.
ಇದನ್ನೂ ಓದಿ | Cyclone Mandous | ಚಂಡಮಾರುತ ಎಫೆಕ್ಟ್: ಮಲೆನಾಡಾದ ಬಿಸಿಲನಾಡು ಕೊಪ್ಪಳ, ವಿಜಯನಗರ: ಎಲ್ಲೆಡೆ ಶೀತಗಾಳಿ, ಮಳೆ