Site icon Vistara News

Cylinder Blast : ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಐವರು ಗಾಯ, ಒಬ್ಬನ ಸ್ಥಿತಿ ಚಿಂತಾಜನಕ

Cylinder blast in bengaluru Five are critical one is in a critical condition

ಬೆಂಗಳೂರು: ಇಲ್ಲಿನ ಬೊಮ್ಮನಹಳ್ಳಿ ಸಮೀಪದ ಗಾರ್ವೇಬಾವಿ ಪಾಳ್ಯದ ಲಕ್ಷ್ಮೀ ಲೇಔಟ್‌ನ ಏಳನೇ ಕ್ರಾಸ್‌ನ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ (Cylinder Blast) ಲಿಕೇಜ್‌ನಿಂದಾಗಿ ಸ್ಫೋಟಗೊಂಡಿದೆ. ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಸುಬ್ರಮಣಿ ಎಂಬುವವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ನೇಪಾಳ ಮೂಲದ ಸಂದೇಶ್ ಕುಟುಂಬ ವಾಸವಿದ್ದರು. ಮನೆಯಲ್ಲಿ ಐದು ಮಂದಿ ವಾಸ ಮಾಡುತ್ತಿದ್ದರು. ರಾತ್ರಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿದೆ. ಆದರೆ ಇದನ್ನು ಗಮನಿಸದೆ ಬೆಳಗ್ಗೆ ಎಂದಿನಂತೆ ಅಡುಗೆ ಮನೆಯ ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡಿದೆ.

ಬೆಳಗ್ಗೆ 6.30 ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಮನೆಯಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದೆ. ಸಂದೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಗಧಗೆನೇ ಹೊತ್ತಿ ಉರಿದ ಕಬ್ಬಿನ ಗದ್ದೆ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಕ್ರಾಸ್ ಬಳಿ ಧಗ- ಧಗನೇ ಕಬ್ಬಿನ ಗದ್ದೆಯು ಹೊತ್ತಿ ಉರಿದಿದೆ. ಮಲಪನಗುಡಿಯ ರೈತರದಾರ ಮೈಲಾರಪ್ಪ, ಶಿವರಾಮಪ್ಪರಿಗೆ ಸೇರಿದ ಎರಡು ಎಕರೆ ಕಬ್ಬಿನ ಪೈರು ಸುಟ್ಟು ಭಸ್ಮವಾಗಿದೆ. ಹೊಸಪೇಟೆಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಹಂಪಿ ಪೊಲೀಸರು, ಕಬ್ಬಿನ ಗದ್ದೆಯ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವ ಕೆಲಸಕ್ಕೆ ಸಾಥ್ ನೀಡಿದರು.

ಇದನ್ನೂ ಓದಿ: Physical Abuse : ಅಪ್ರಾಪ್ತ ಬಾಲಕರಿಂದ 10ರ ಬಾಲಕಿ ಮೇಲೆ ಚಾಕು ತೋರಿಸಿ ಅತ್ಯಾಚಾರ, ಮೊಬೈಲ್‌ನಲ್ಲಿ ರೆಕಾರ್ಡ್!

ರಾಜಧಾನಿಯಲ್ಲಿ ಎರಡು ಬಟ್ಟೆ ಶೋರೂಂ ಬೆಂಕಿಗಾಹುತಿ

ಬೆಂಗಳೂರು: ಸೋಮವಾರ ಮಧ್ಯರಾತ್ರಿ ಸಂಭವಿಸಿದ ಎರಡು ಭಾರೀ ಅಗ್ನಿ ಅವಘಡಗಳಲ್ಲಿ (Fire Accident) ಎರಡು ಬಟ್ಟೆ ಶೋರೂಂಗಳು ಬೆಂಕಿಗಾಹುತಿಯಾಗಿವೆ. ಒಂದು ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಹಾಗೂ ಇನ್ನೊಂದು ಮಲ್ಲೇಶ್ವರಂನಲ್ಲಿ ಸಂಭವಿಸಿವೆ.

ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಬೆಂಕಿನ ಕೆನ್ನಾಲಿಗೆಗೆ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ ಸುಟ್ಟು ಕರಕಲಾಗಿದೆ. ಮೂರಂತಸ್ತಿನ ಕಟ್ಟಡ ಧಗ ಧಗನೆ ಹೊತ್ತಿ ಉರಿದಿದ್ದು, ಕಟ್ಟಡದ ಮುಂದೆ ಇದ್ದ ತೆಂಗಿನ ಮರಕ್ಕೂ ಬೆಂಕಿ ಚಾಚಿಕೊಂಡಿತು. ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಕೂಡ ಬೆಂಕಿಗಾಹುತಿಯಾಗಿದೆ. ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ‌ ರೂಂ ಮಾತ್ರವಲ್ಲದೆ ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗಳಿಗೂ ಬೆಂಕಿ ತಗುಲಿದೆ. ನಿನ್ನೆ ರಾತ್ರಿ 11.45ರ ಸುಮಾರಿಗೆ ಘಟನೆ ನಡೆದಿದೆ.

ಬೆಂಕಿ ಕಿಡಿ ಹೊತ್ತಿಕೊಂಡಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಬೆಂಕಿ ಚಾಚಿರುವ ಸಂಶಯ ಇದೆ. ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿಯ ಆರ್ಭಟ ಕಂಡು ವಾಹನ ಸವಾರರು ಬೆಚ್ಚಿಬಿದ್ದರು. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿದವು. ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿದ್ದ ನಾಲ್ವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ಬೆಂಕಿ ಹಬ್ಬುತ್ತಿದ್ದಂತೆ ಇವರು ಪಕ್ಕದ ಕಟ್ಟಡಕ್ಕೆ ಜಂಪ್ ಆಗಿದ್ದರು. ಒಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೊದಲು ಪಕ್ಕದ ಕಟ್ಟಡಕ್ಕೆ ಹೊತ್ತಿದ್ದ ಬೆಂಕಿ ಆರಿಸಿದರು. ನಂತರ ಕಟ್ಟಡದ ಹೊರಗೆ ಉರಿಯುತ್ತಿದ್ದ ಬೆಂಕಿ ನಂದಿಸಿ ಏಣಿ ಮೂಲಕ ಮೊದಲ ಮಹಡಿಗೆ ಎಂಟ್ರಿ ಕೊಟ್ಟರು. ಹೊಗೆ ಮಧ್ಯೆ ಬ್ರೀತಿಂಗ್ ಅಪರೇಟಸ್ ಧರಿಸಿ ಕಟ್ಟಡದೊಳಗೆ ಹೋಗಿ ಕಟ್ಟಡದ ತುದಿಯಲ್ಲಿ ಕೂತು ಬೆಂಕಿ ಆರಿಸಿದರು.

ಕಟ್ಟರ್‌ನಿಂದ ಶೆಟರ್ ಓಪನ್ ಮಾಡಿ ಓಪನ್ ಮಾಡಿದ ಜಾಗದ ಮೂಲಕ ನೀರು ಹಾಯಿಸಿದರು. ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಗಾಯವಾಗಿದೆ. ಮೊದಲ ಮಹಡಿಯಿಂದ ಗ್ಲಾಸ್ ಒಡೆದು ಬಿದ್ದಾಗ ಸಿಬ್ಬಂದಿಯ ಕೈ ಬೆರಳಿಗೆ ಗಾಯವಾಗಿದೆ. ಪಕ್ಕದಲ್ಲೇ ಇದ್ದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯಲಾಗಿದೆ. ಎರಡೂವರೆ ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂತು. ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಲ್ಲೇಶ್ವರದಲ್ಲೂ ಬೆಂಕಿ

ಮಲ್ಲೇಶ್ವರ ಮುಖ್ಯ ರಸ್ತೆಯಲ್ಲಿರುವ ಒಂದು ಬಟ್ಟೆ ಅಂಗಡಿಯಲ್ಲೂ ಬೆಂಕಿ ಅನಾಹುತ ಸಂಭವಿಸಿದೆ. ಲಕ್ಷಾಂತರ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version