Site icon Vistara News

ಮೊಬೈಲ್‌ ಟಾರ್ಚ್‌ ಆನ್‌ ಮಾಡಿದ್ದೇ ಸಿಲಿಂಡರ್‌ ಬ್ಲಾಸ್ಟ್‌ಗೆ ಕಾರಣ; ಹಸುಗೂಸು ಸೇರಿ 7 ಮಂದಿ ಗಂಭೀರ

Cylinder blast in Belagavi Seven injured

ಬೆಳಗಾವಿ: ಅವರೆಲ್ಲೂ ರಾತ್ರಿ ಊಟದ ಕೆಲಸವನ್ನು ಮುಗಿಸಿ, ಇನ್ನೇನು ನಿದ್ದೆಗೆ ಜಾರುವುದರಲ್ಲಿ ಇದ್ದರು. 9 ತಿಂಗಳ ಮಗುವನ್ನು ಆಟವಾಡಿಸಿ ನಿದ್ರೆ ಮಾಡಿಸಿದ್ದರು. ಲೈಟ್‌ ಆಫ್‌ ಮಾಡಿ ತಾವು ಮಲಗಬೇಕು ಎಂದಾಗ ಸಿಲಿಂಡರ್‌ ಗ್ಯಾಸ್‌ (Cylinder Blast) ವಾಸನೆ ಮೂಗಿಗೆ ಬಡಿದಿತ್ತು. ಏನು ಆಗಿರಬಹುದೆಂದು ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ‌ಸಿಲಿಂಡರ್ ಸ್ಫೋಟಗೊಂಡಿದೆ.

ಬೆಳಗಾವಿಯ ಗೋಕಾಕ ತಾಲೂಕಿನ ‌ಅಕ್ಕತಂಗೇರಹಾಳ ಗ್ರಾಮದಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ಮಗು ಸೇರಿ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13) ಬಸನಗೌಡ ನಿರ್ವಾಣಿ (9 ತಿಂಗಳು) ಗಂಭೀರ ಗಾಯಗೊಂಡಿದ್ದಾರೆ.

ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆಯ ಹಂಚುಗಳು ಹಾರಿಹೋಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಾತ್ರಿ ಮಲಗಿರುವಾಗ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆ ಆಗಿತ್ತು. ಮೊಬೈಲ್‌ ಟಾರ್ಚ್‌ ಆನ್‌ ಮಾಡಿದಾಗ ಒಮ್ಮೆಲೆ ಸಿಡಿದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ‌ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕಲಗಿ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದ ಭಯಾನಕ ವಿಡಿಯೋ ವೈರಲ್ ಆಗಿದೆ. ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಮನೆಯೇ ಧಗಧಗಿಸಿ ಹೊತ್ತಿ ಉರಿದಿದೆ.

ಹೊತ್ತಿ ಉರಿದ ಹಾಸಿಗೆ ಅಂಗಡಿ

ಬೆಂಗಳೂರಿನ ಶಿವಾಜಿನಗರದ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿಸದೆ. ಶಿವಾಜಿನಗರದ ಬಸ್ ನಿಲ್ದಾಣದ ಬಳಿ ಇರುವ ಬೆಡ್‌ ಅಂಗಡಿಯು ಹೊತ್ತಿ ಉರಿದಿದೆ. ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ. ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ಶಾಟ್ ಸರ್ಕ್ಯೂಟ್‌ನಿಂದ ಹೀಗೆ ಆಗಿರಬಹುದೆಂದು ಶಂಕಿಸಲಾಗಿದೆ. ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಹಾಳಾಗಿವೆ.

ನಾಗ್ಪುರದಲ್ಲಿ ಸೋಲಾರ್ ಉತ್ಪನ್ನಗಳ ಕಂಪನಿಯಲ್ಲಿ ಸ್ಫೋಟ: 9 ಮಂದಿ ಸಾವು

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಸೋಲಾರ ಸ್ಫೋಟಕ ತಯಾರಿಕಾ ಕಂಪನಿಯಲ್ಲಿ (Solar Plant ) ಸ್ಫೋಟ ಸಂಭವಿಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕ್ಯಾಸ್ಟ್ ಬೂಸ್ಟರ್ ಪ್ಲಾಂಟ್​ನಲ್ಲಿ ಪ್ಯಾಕಿಂಗ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ನಾಗ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊದ್ದಾರ್ ತಿಳಿಸಿದ್ದಾರೆ.

ಭಾನುವಾರವಾದರೂ ಉತ್ಪಾದನಾ ಘಟಕದಲ್ಲಿ ಕೆಲಸ ನಡೆಯುತ್ತಿತ್ತು. ಬೆಳಗ್ಗೆ 9 ಗಂಟೆ ವೇಳೆ ಭಾರೀ ಸದ್ದಿನೊಂದಿಗೆ ಸ್ಫೋಟ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ 9 ಮಂದಿ ಅಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಅನೇಕರು ಗಾಯಗೊಂಡಿರುವ ಅನುಮಾನಗಳು ವ್ಯಕ್ತವಾಗಿವೆ. ಸ್ಫೋಟದ ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದರ ಕುರಿತು ಪೂರ್ಣ ಮಾಹಿತಿ ಸಿಕ್ಕಿಲ್ಲ.

ಪೊಲೀಸರು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ಬಳಿಕ ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version