Site icon Vistara News

Karwar: ಕಾರವಾರದಲ್ಲಿ ಸಿಲಿಂಡರ್‌ ಸ್ಫೋಟ; ಕಾರ್ಮಿಕರ ಕಾಲೋನಿ 5 ಮನೆಗಳಿಗೆ ಬೆಂಕಿ

Cylinder Blast

Cylinder Blast In Karwar In Labour Colony

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ (Karwar) ಕಾರ್ಮಿಕರ ಕಾಲೋನಿಯಲ್ಲಿ ಸಿಲಿಂಡರ್‌ (Cylinder Blast) ಸ್ಫೋಟಗೊಂಡಿದ್ದು, ನಾಲ್ಕೈದು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮುದಗಾ ನೌಕಾನೆಲೆಯ ಲೇಬರ್‌ ಕಾಲೋನಿಯಲ್ಲಿ (Labour Colony) ಭಾನುವಾರ (ಮಾರ್ಚ್‌ 10) ಬೆಳಗ್ಗೆ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ.

ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪನಿಯ ಕಾರ್ಮಿಕರಿಗಾಗಿ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಲೇಬರ್‌ ಕಾಲೋನಿಯ ಬಿ2 ಸಾಲಿನ ಶೆಡ್‌ ಒಂದರಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡಿದೆ. ಇದರಿಂದಾಗಿ ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಕಾಲೋನಿ ತುಂಬ ದಟ್ಟ ಹೊಗೆ ಆವರಿಸಿತ್ತು. ಇದರಿಂದಾಗಿ ಈಗಲೂ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

ಅದೃಷ್ಟವಶಾತ್‌ ಯಾವುದೇ ಕಾರ್ಮಿಕರಿಗೆ ತೊಂದರೆಯಾಗಿಲ್ಲ. ನಾಲ್ಕೈದು ಶೆಡ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಸ್ಫೋಟದ ಬಳಿಕ ಬೆಂಕಿ ಹೊತ್ತಿಕೊಂಡ ಕಾರಣ ಎಲ್ಲ ಕಾರ್ಮಿಕರು ಶೆಡ್‌ಗಳಿಂದ ಓಡಿ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಲೋನಿಯಲ್ಲಿ 150 ಅಧಿಕ ಶೆಡ್‌ಗಳಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: Fire Accident: ವಿಧಾನಸೌಧ ಸಚಿವಾಲಯದಲ್ಲಿ ಭಾರಿ ಅಗ್ನಿ ದುರಂತ; ಕಡತಗಳು ಭಸ್ಮ

ಕೆಲ ದಿನಗಳ ಹಿಂದಷ್ಟೇ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಐದು ಗುಡಿಸಲುಗಳು ಸುಟ್ಟು ಭಸ್ಮವಾಗಿರುವ ಘಟನೆಯು ಶಿರಾ ತಾಲೂಕಿನ ಕಳ್ಳಂಬೆಳ್ಖ ಹೋಬಳಿಯ ನೆಲದಿಮ್ಮನಹಳ್ಳಿ ಗ್ರಾಮದಲ್ಲಿ ಜರುಗಿತ್ತು. ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ (ಮಾರ್ಚ್‌ 6) ಕೆಂಪಮ್ಮ ಎಂಬುವವರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿಬಿದ್ದು, ನಂತರ ಪಕ್ಕದಲ್ಲಿದ್ದ ನರಸಮ್ಮ, ಸರಸ್ವತಮ್ಮ, ಶಿವಮ್ಮ, ರಾಮಕ್ಕ ಎಂಬುವವರ ಗುಡಿಸಲುಗಳಿಗೂ ಬೆಂಕಿ ತಗುಲಿ, ಸಂಪೂರ್ಣ ಸುಟ್ಟು ಭಸ್ಮವಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version