ದೇವನಹಳ್ಳಿ: ಬಿಜೆಪಿಯವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅಧಿಕಾರ ಇದ್ದಾಗ ಅವರು ಯಾರಿಗೂ ಏನೂ ಸಹಾಯ ಮಾಡಲು ಆಗಲಿಲ್ಲ. ಇನ್ನು 60 ದಿನ ಅವರ ಕೈಯಲ್ಲಿ ಅಧಿಕಾರ ಇರುತ್ತದೆ. ಅಷ್ಟರೊಳಗೆ ಏನಾದರೂ ಮಾಡಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಜನ ಅವರನ್ನು ನಂಬುತ್ತಿಲ್ಲ, ಈಗ ಯಾಕೆ ಜನರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಮಾಡಬಹುದಿತ್ತಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನ ʼನಾ ನಾಯಕಿʼ ಕಾರ್ಯಕ್ರಮದ ಕುರಿತು ಬಿಜೆಪಿ ಟೀಕೆಗಳ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿ, ನಾವು ಯಾವಾಗಲೂ ಏನು ಮಾತುಕೊಟ್ಟಿದ್ದೇವೆ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು. ಮಹಿಳೆಯರಿಗೆ ತಲಾ 2 ಸಾವಿರ ರೂಪಾಯಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಕ್ಕಳ ಸ್ಕೂಲ್ ಫೀಸ್, ಗ್ಯಾಸ್, ಅಡುಗೆ ಸಾಮಗ್ರಿಗಳ ಬೆಲೆ ಏರಿಕೆ ಆಗಿದೆ. ಪ್ರತಿ ತಿಂಗಳು ಮನೆ ನಡೆಸಲು ಮನೆ ಗೃಹ ಲಕ್ಷ್ಮೀಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ | ನಾ ನಾಯಕಿ | ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ನಿಂದ ಬಂಪರ್ ಘೋಷಣೆ; ಪ್ರತಿ ತಿಂಗಳು ₹2,000 ರೂ.
ನಾ ನಾಯಕಿ ಕಾರ್ಯಕ್ರಮ ಕುರಿತು ಸಿಎಂ ವ್ಯಂಗ್ಯವಾಡಿದ ವಿಚಾರಕ್ಕೆ ಉತ್ತರಿಸಿ, ಯಾರು ಏನು ಬೇಕಾದರೂ ಟ್ವೀಟ್ ಮಾಡಿಕೊಳ್ಳಲಿ. ಬಿಜೆಪಿಯವರು ಟ್ವೀಟ್ ಆದರೂ ಮಾಡಿಕೊಳ್ಳಲಿ, ಪಲ್ಟಿ ಆದರೂ ಹೊಡೆಯಲಿ. ನಗಲಿ, ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಜನರ ನೋವಿನಲ್ಲಿ ಭಾಗಿಯಾಗುವ ಕೆಲಸ ಮಾಡುತ್ತೇವೆ. ಪ್ರತಿಯೊಂದು ಕುಟುಂಬ, ಮನೆಯಲ್ಲಿಯೂ ನಾಯಕಿ ಇದ್ದಾಳೆ. ನನ್ನ ಹೆಂಡತಿ, ಮಗಳು ನಾಯಕಿ, ಪ್ರತಿಯೊಂದು ಹೆಣ್ಣು ಮಗಳಲ್ಲಿಯೂ ನಾಯಕಿಯ ಗುಣವಿದೆ ಎಂದರು.
ದೇವರನ್ನು ಲಕ್ಷ್ಮೀ ವೆಂಕಟೇಶ್ವರ, ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ. ಗಣೇಶನಿಗೆ ಮದುವೆ ಆಗಿಲ್ಲ, ಆದರೂ ಗೌರಿ ಗಣೇಶ ಎನ್ನುತ್ತೇವೆ. ಮಾತೃ ಭೂಮಿ ಎನ್ನುತ್ತೇವೆ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಮದರ್ ಟಂಗ್ ಯಾವುದು ಎಂದು ಕೇಳಿದ್ದಾರೆ. ತಂದೆ ಭಾಷೆ ಯಾವುದು ಎಂದು ಕೇಳಿಲ್ಲ. ಈ ಭೂಮಿಗೆ, ಮನೆಯ ಗೃಹ ಲಕ್ಷ್ಮೀಗೆ ಮೊದಲ ಆದ್ಯತೆ ಕೊಡುವುದು ನಮ್ಮ ಸಂಸ್ಕೃತಿಯಾಗಿದೆ. ಪಾಪ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಾರ್ಮಿಕರಿಗೆ ಆದಾಯ ಹೆಚ್ಚಾಗಿದಿಯಾ ಎಂದ ಅವರು, ನಮ್ಮ ಪಕ್ಷಕ್ಕೆ 50 ಪರ್ಸೆಂಟ್ ಮಹಿಳೆಯರು, ಯುವಕರ ಬೆಂಬಲವಿದೆ. ನಮಗೆ ಯಾವುದೇ ಜಾತಿ, ಧರ್ಮ ಇಲ್ಲ. ಈ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದನ್ನೂ ಓದಿ | Women Representation | ರಾಜ್ಯದಲ್ಲಿ ನಿಧಾನವಾಗಿ ಹೆಚ್ಚುತ್ತಿದೆ ಮಹಿಳಾ MLAಗಳ ಸಂಖ್ಯೆ: ಕಾಂಗ್ರೆಸ್ ಪಕ್ಷವೇ ಮುಂದೆ; BJP-JDS ಹಿಂದೆ